
ಇಂದು ವಿಶ್ವ ಏಡ್ಸ್ ದಿನವಾಗಿದೆ. ಎಚ್ಐವಿ ಒಂದು ಮಾರಕ ರೋಗವಾಗಿದ್ದು, ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ. ಎಚ್ಐವಿ ಆರಂಭಿಕ ರೋಗ ಲಕ್ಷಣಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಎಚ್ಐವಿಯ ಆರಂಭದಲ್ಲೇ ಪತ್ತೆಯಾದ್ರೆ ಸೋಂಕು ಹರಡದಂತೆ ತಡೆಯಬಹುದು. ಇದರ ಮೂರನೇ ಹಂತವನ್ನು ಏಡ್ಸ್ ಎಂದು ಕರೆಯಲಾಗುತ್ತದೆ.
ಎಚ್ಐವಿ ಆರಂಭಿಕ ಲಕ್ಷಣಗಳು ಮತ್ತು ಚಿಹ್ನೆಗಳು :
ಶೀತ ಅಥವಾ ಜ್ವರ ಆಗಾಗ ಕಾಣಿಸಿಕೊಳ್ಳುತ್ತದೆ. ತಲೆನೋವು, ಸುಸ್ತು, ಊದಿಕೊಂಡ ದುಗ್ಧರಸ ಗ್ರಂಥಿಗಳು, ದದ್ದು, ಗಂಟಲು ಕೆರತ, ಸ್ನಾಯು / ಕೀಲು ನೋವು, ರಾತ್ರಿ ಬೆವರುವಿಕೆ, ಅತಿಸಾರ ಇದು ಆರಂಭಿಕ ಲಕ್ಷಣವಾಗಿದೆ.
ಬಾಯಿಯಲ್ಲಿ ಕ್ಯಾಂಕರ್ ಅಥವಾ ಹುಣ್ಣು ಅಥವಾ ಹಲ್ಲಿನ ಬಾವು ಕೂಡ ಇದ್ರ ಆರಂಭಿಕ ಲಕ್ಷಣವಾಗಿದೆ. ಇದೆಲ್ಲವೂ ಕಾಣಿಸಿಕೊಳ್ಳಲೇ ಬೇಕೆಂದೇನಿಲ್ಲ. ಎಚ್‌ಐವಿ ಇರುವವರಿಗೆ ಈ ಸೋಂಕು ಬಂದ್ರೆ ಚೇತರಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಮೊದಲಿಗಿಂತ ಹೆಚ್ಚು ಅನಾರೋಗ್ಯ ಸಮಸ್ಯೆ ಇವರನ್ನು ಕಾಡುತ್ತದೆ. ಮನುಷ್ಯನಿಗೆ ಆಘಾತಕಾರಿಯಲ್ಲದ ಸೋಂಕು ಕೂಡ ಇವನಿಗೆ ತೊಂದರೆ ನೀಡಲು ಶುರು ಮಾಡುತ್ತದೆ.
ಸೋಂಕು ಹರಡಿದ ಒಂದರಿಂದ ಎರಡು ತಿಂಗಳೊಳಗೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಎಚ್ಐವಿ ಸೋಂಕಿನ ಆರಂಭದಲ್ಲಿ ಯಾವುದೇ ರೋಗಲಕ್ಷಣ ಕಾಣಿಸುವುದಿಲ್ಲ.
ಎಚ್‌ಐವಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಪರೀಕ್ಷೆ ಏಕೈಕ ಮಾರ್ಗವಾಗಿದೆ. ಕಾಂಡೋಮ್ ಬಳಸದೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದರೆ, ಸೂಜಿಯನ್ನು ಹಂಚಿಕೊಂಡಿದ್ದರೆ ಅಂಥವರು ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.