ಬೆಂಗಳೂರು: ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಬದಲಾವಣೆಗೆ ಹೈಕಮಾಂಡ್ ತೀರ್ಮಾನಿಸಿದೆ.
ಹಾಲಿ ಇರುವ ಐವರು ಕಾರ್ಯಾಧ್ಯಕ್ಷರನ್ನು ಬದಲಾವಣೆ ಮಾಡಲಿದ್ದು, ಹೊಸದಾಗಿ ಆರು ಜನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಎನ್. ಚಂದ್ರಪ್ಪ, ಸಲೀಂ ಮಹಮ್ಮದ್ ಅವರಿಗೆ ಹೊಣೆಗಾರಿಕೆಯಿಂದ ಮುಕ್ತಿ ನೀಡಲಿದ್ದು, ಮಹಿಳೆ ಸೇರಿದಂತೆ ಆರು ಜನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ.
ವಿನಯ್ ಕುಮಾರ್ ಸೊರಕೆ(ಹಿಂದುಳಿದ ವರ್ಗ), ವಿನಯ ಕುಲಕರ್ಣಿ(ಲಿಂಗಾಯತ), ವಸಂತ್ ಕುಮಾರ್(ಪರಿಶಿಷ್ಟ ಜಾತಿ), ಜಿ.ಸಿ. ಚಂದ್ರಶೇಖರ್(ಒಕ್ಕಲಿಗ), ತನ್ವೀರ್ ಸೇಟ್(ಮುಸ್ಲಿಂ), ಅಂಜಲಿ ನಿಂಬಾಳ್ಕರ್ ಅವರನ್ನು ನೇಮಕ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಗೆ ಮೊದಲೇ ಪಕ್ಷ ಸಂಘಟನೆಗೆ ಚುರುಕು ನೀಡುವ ಉದ್ದೇಶದಿಂದ ಮತ್ತು ಸರ್ಕಾರದಲ್ಲಿ ಸ್ಥಾನ ಪಡೆದಿರುವ ಪಕ್ಷದ ಪದಾಧಿಕಾರಿಗಳನ್ನು ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲು ಚಿಂತನೆ ನಡೆದಿದೆ. ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಸಚಿವ ಸಂಪುಟದಲ್ಲಿದ್ದಾರೆ. ಸಲೀಂ ಅಹಮದ್ ವಿಧಾನಪರಿಷತ್ ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿದ್ದಾರೆ. ಬಿ.ಎನ್. ಚಂದ್ರಪ್ಪ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸ ಕಾರ್ಯಾಧ್ಯಕ್ಷರ ನೇಮಕಾತಿಗೆ ಚಿಂತನೆ ನಡೆದಿದೆ ಎನ್ನಲಾಗಿದೆ.