ಹೊಸಪೇಟೆ: ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಸ್ಟಾಪ್ ಲಾಗ್ ಗೇಟ್ ಕೂರಿಸಿದ 20 ಕಾರ್ಮಿಕರಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಲಾ 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.
ಜಮೀರ್ ಅವರ ಅನುಪಸ್ಥಿತಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತುಂಗಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಹಣ ಹಸ್ತಾಂತರಿಸಿದ್ದಾರೆ. ಕ್ರೇನ್ ಆಪರೇಟರ್, ಜಲಾಶಯಕ್ಕೆ ಗೇಟ್ ಇಳಿಸುವ ಕಾರ್ಯದಲ್ಲಿ ತೊಡಗಿದವರು ಸೇರಿ ಒಟ್ಟು 20 ಪ್ರಮುಖ ಕಾರ್ಮಿಕರನ್ನು ಗುರುತಿಸಿ ಬಹುಮಾನ ನೀಡಲಾಗಿದೆ.
ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಗೊಳಿಸಿದರೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಮಾತು ಕೊಟ್ಟಿದ್ದರು. ಅದರಂತೆ ಶಾಸಕ ಗಣೇಶ್ ಅವರಿಗೆ ಜವಾಬ್ದಾರಿ ವಹಿಸಿದ್ದು, ವೈಯಕ್ತಿಕವಾಗಿ ಹಣ ಕಳುಹಿಸಿಕೊಟ್ಟು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ನಾಲ್ಕು ದಿನ ಹೊಸಪೇಟೆಯಲ್ಲಿ ಉಳಿದು ಸ್ಟಾಪ್ ಲಾಸ್ ಗೇಟ್ ಅಳವಡಿಕೆಯಾಗುವವರೆಗೆ ಮಾರ್ಗದರ್ಶನ ನೀಡಿದ ಸಚಿವ ಜಮೀರ್ ಅಹ್ಮದ್ ಶ್ರಮಿಕ ವರ್ಗದ ಪರ ಕಾಳಜಿ ತೋರಿಸಿದ್ದಾರೆ. ಇಂತಹ ಸಚಿವರನ್ನು ನಾನು ಜೀವಮಾನದಲ್ಲಿ ನೋಡಿಲ್ಲ ಎಂದು ಶಾಸಕ ಗಣೇಶ್ ತಿಳಿಸಿದ್ದಾರೆ.