ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡುವ ಸಹಾಯಧನ ಭಾರಿ ಏರಿಕೆ ಮಾಡಲಾಗಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಮಿಕರ ಮಾಸಿಕ ಪಿಂಚಣಿ ಮೊತ್ತವನ್ನು 2 ಸಾವಿರ ರೂ.ನಿಂದ 3 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕುಟುಂಬ ಪಿಂಚಣಿಯನ್ನು 1000 ದಿಂದ 2000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಹೆರಿಗೆ ಸೌಲಭ್ಯದ ಮೊತ್ತ 20 ಸಾವಿರದಿಂದ 25 ಸಾವಿರ ರೂಪಾಯಿಗೆ ಹೆಚ್ಚಿಸಿದ್ದು, ಹೆಣ್ಣು ಮಗುವಿಗೆ ನೀಡುವ ಸಹಾಯಧನವನ್ನು 30 ರಿಂದ 35 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಕೂಡ ಹೆಚ್ಚಳ ಮಾಡಲಾಗಿದ್ದು, ನರ್ಸರಿ ಹಂತದಿಂದ ನಾಲ್ಕನೇ ತರಗತಿಯ ಮಕ್ಕಳಿಗೆ 3 ರಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದ್ದು, 5 ರಿಂದ 8ನೇ ತರಗತಿಗಳಿಗೆ ನೀಡುತ್ತಿದ್ದ 8 ಸಾವಿರ ರೂ. ಮೊತ್ತವನ್ನು 9 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಎಸ್ಎಸ್ಎಲ್ಸಿ ಮಕ್ಕಳಿಗೆ 10 ರಿಂದ 12 ಸಾವಿರ ರೂ.ಗೆ, ಪಿಯುಸಿ ವಿದ್ಯಾರ್ಥಿಗಳಿಗೆ 10 ರಿಂದ 15 ಸಾವಿರ ರೂ.ಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗಿದೆ.
ಕೈಗಾರಿಕೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ 12 ರಿಂದ 20 ಸಾವಿರ ರೂ.ಗೆ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 15 ರಿಂದ 20 ಸಾವಿರ ರೂ.ಗೆ, ಪದವಿ ವಿದ್ಯಾರ್ಥಿಗಳಿಗೆ 15 ರಿಂದ 25 ಸಾವಿರ ರೂ.ಗೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25 ರಿಂದ 40 ಸಾವಿರ ರೂ.ಗೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ 30 ರಿಂದ 50 ಸಾವಿರ ರೂ.ಗೆ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ 40 ರಿಂದ 70 ಸಾವಿರ ರೂ.ಗೆ, ಕಾನೂನು ವಿದ್ಯಾರ್ಥಿಗಳಿಗೆ 25 ರಿಂದ 50 ಸಾವಿರ ರೂಪಾಯಿಗೆ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪಕ್ಕೆ ಕಾರ್ಮಿಕ ಕಲ್ಯಾಣ ಮಂಡಳಿ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ.
ಅದೇ ರೀತಿ ಬಿಎಡ್ ಮತ್ತು ಇತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯಧನವನ್ನು 20 ಸಾವಿರ ರೂ.ಗೆ, ವಿವಾಹ ಸಹಾಯಧನವನ್ನು 60 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. 8 ಲಕ್ಷ ಮಂದಿ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಅನುಕೂಲ ಪಡೆಯಲಿದ್ದಾರೆ ಎನ್ನಲಾಗಿದೆ.