ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅವಲಂಬಿತರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಹೊಲಿಗೆ ಯಂತ್ರ ಯೋಜನೆ ಜಾರಿಗೊಳಿಸಲಾಗುವುದು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅವಲಂಬಿತರಿಗೆ ಹೊಲಿಗೆ ಯಂತ್ರ ನೀಡುವ ಯೋಜನೆ ಬಜೆಟ್ ನಲ್ಲಿ ಘೋಷಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಗಾಗಿ 15 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಾರ್ಮಿಕರಿಗೆ ಶ್ರಮ ಸಾಮರ್ಥ್ಯ ಟೂಲ್ ಕಿಟ್ ವಿತರಣೆ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಕಾರ್ಮಿಕರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ಯೋಜನೆಗೆ 70 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ವಲಸೆ ಕಾರ್ಮಿಕರ 6 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಮಿಕರ ಕೆಲಸದ ಸ್ಥಳದಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲಾಗುವುದು ಎಂದು ಹೇಳಿದ್ದಾರೆ.