
ಬೆಂಗಳೂರು: ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರ ಕನಿಷ್ಠ ವೇತನ 7 ವರ್ಷಗಳಿಂದ ಪರಿಷ್ಕರಿಸಿಲ್ಲ ಎಂದು ಅಕ್ಷೇಪಿಸಿದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಆಲ್ ಇಂಡಿಯಾ ಸೆಂಟ್ರಲ್ ಯೂನಿಯನ್ ಆಫ್ ಟ್ರೇಡ್ ಕೌನ್ಸಿಲ್(ಎಐಸಿಟಿಯು) ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿಂದ ಏಕ ಸದಸ್ಯ ಪೀಠದಲ್ಲಿ ಬುಧವಾರ ನಡೆದಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಲಾಗಿದೆ.
ಅರ್ಜಿದಾರರ ಪರ ವಕೀಲರಾದ ಮೈತ್ರೇಯಿ ಕೃಷ್ಣನ್ ವಾದ ಮಂಡಿಸಿದ್ದಾರೆ. ಅವರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಮುಖ್ಯ ಕಾರ್ಮಿಕ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಲಾಗಿದೆ.
ಕೃಷಿ ಕಾರ್ಮಿಕರು, ಇತರೆ ಗಣಿಗಾರಿಕೆ, ಕಟ್ಟಡ, ರಸ್ತೆ ನಿರ್ಮಾಣ, ನಿರ್ವಹಣೆ, ಕಲ್ಲು ಗಣಿಗಾರಿಕೆ, ಸ್ವೀಪಿಂಗ್, ಕ್ಲೀನಿಂಗ್, ಲೋಡಿಂಗ್ ಸೇರಿ ವಿವಿಧ ವಲಯದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನವನ್ನು 7 ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಕನಿಷ್ಠ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು. ಸುಪ್ರೀಂ ಕೋರ್ಟ್ ಮಾನದಂಡಗಳಿಗೆ ಅನುಗುಣವಾಗಿ ಕನಿಷ್ಠ ವೇತನ ಪರಿಷ್ಕರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.