ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಉಚಿತ ಕೆಎಸ್‍ಆರ್‍ಟಿಸಿ ಬಸ್‍ಪಾಸ್ ಸೌಲಭ್ಯ ಪಡೆದುಕೊಳ್ಳಲು ಗ್ರಾಮ-ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಪಾಸ್ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿಯೊಂದಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪಡೆದ ಗುರುತಿನ ಚೀಟಿ, ಆಧಾರ್ ಕಾರ್ಡ್ ಸಲ್ಲಿಸಿ ಅಲ್ಲಿಯೇ ಸ್ಮಾರ್ಟ್ ಕಾರ್ಡ್ ಮಾದರಿಯ ಬಸ್‍ಪಾಸ್‍ಗಳನ್ನು ಪಡೆದುಕೊಳ್ಳಬಹುದು.
ಬಸ್‍ಪಾಸ್‍ಗಾಗಿ ಅರ್ಜಿ ಸಲ್ಲಿಸುವ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರಬೇಕು ಹಾಗೂ ನೋಂದಣಿ ಚಾಲ್ತಿಯಲ್ಲಿರಬೇಕು. ಪಾಸುದಾರರು ನಗರ, ಸಾಮಾನ್ಯ/ಹೊರವಲಯ ಹಾಗೂ ವೇಗದೂತ ಬಸ್ ಗಳಲ್ಲಿ, ಪಾಸಿನಲ್ಲಿ ನಮೂದಿಸಲಾದ ಪ್ರಾರಂಭಿಕ ಸ್ಥಳ/ಪ್ರಾರಂಭಿಕ ಬಸ್ ನಿಲ್ದಾಣದಿಂದ 07 ಹಂತಗಳವರೆಗೆ (ಗರಿಷ್ಟ 45 ಕಿ.ಮೀ) ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ.
ಬಸ್‍ಪಾಸಿನ ಮಾನ್ಯತಾ ಅವಧಿಯು ಮೂರು ತಿಂಗಳಾಗಿರುತ್ತದೆ. ಮೂರು ತಿಂಗಳ ಬಸ್ ಪಾಸ್ ಮಾನ್ಯತಾ ಅವಧಿ ಮುಕ್ತಾಯವಾದ ನಂತರ ಮರು ಅವಧಿಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್‍ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ವಿಳಾಸವನ್ನು ಬದಲಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.