ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ವಸತಿ ಕಲ್ಪಿಸಲು ನೀಲನಕ್ಷೆ ರೂಪಿಸಲು ವಸತಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಿದ್ದು, ಈ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸಲು ನಿರ್ಧರಿಸಲಾಗಿದೆ. ವಸತಿ, ಕಾರ್ಮಿಕ ಹಾಗೂ ಪೌರಾಡಳಿತ ಇಲಾಖೆಯ ಸಹಯೋಗದಲ್ಲಿ ಹೊಸ ವಸತಿ ಸಮುಚ್ಚಯ ಯೋಜನೆ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ಲಭ್ಯವಿರುವ ಜಮೀನು, ಹಣಕಾಸು ಹೊಂದಾಣಿಕೆ, ಕೇಂದ್ರ, ರಾಜ್ಯ ಸರ್ಕಾರದ ಸಹಾಯಧನ, ಪೌರಾಡಳಿತ, ಕಾರ್ಮಿಕ ಇಲಾಖೆಗಳಲ್ಲಿ ದೊರೆಯುವ ನೆರವು ಕುರಿತು ಸಮಗ್ರ ಮಾಹಿತಿಯೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಸತಿ ಇಲ್ಲದ ಕಟ್ಟಡ ಕಾರ್ಮಿಕರ ಸಮೀಕ್ಷೆ ಕೈಗೊಳ್ಳಬೇಕು. ಬೇಡಿಕೆ ಆಧರಿಸಿ ವಸತಿ ಯೋಜನೆ ರೂಪಿಸಬೇಕು. ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಗೆ ಬಡ್ಡಿ ರಹಿತ ಸಾಲದ ವ್ಯವಸ್ಥೆ ಸಿಗುತ್ತಿದ್ದು, ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಜಮೀರ್ ಅಹ್ಮದ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪೌರಾಡಳಿತ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಕಾರ್ಮಿಕ ಇಲಾಖೆ ಆಯುಕ್ತ ನಾಗರಾಜ್ ಮೊದಲಾದವರು ಇದ್ದರು.