ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಟ್ಟಡ ಕಾರ್ಮಿಕರಿಗೆ ಗುಂಪು ವಸತಿ ಮತ್ತು ವಿಮೆ ಯೋಜನೆ ಜಾರಿಗೆ ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಮೂರು ಮಹಡಿಯ ಜೆ ಪ್ಲಸ್ 2 ಮನೆಗಳನ್ನು ನಿರ್ಮಿಸಿ ಕಾರ್ಮಿಕರಿಗೆ ನೀಡಲಾಗುವುದು. ಕಾರ್ಮಿಕರ ಹೆಸರಲ್ಲಿ ಸೈಟ್ ಇದ್ದರೆ ಮಾತ್ರ ಮನೆ ಕಟ್ಟಿಸಿಕೊಳ್ಳಲು ಅನುದಾನ ನೀಡುವ ವ್ಯವಸ್ಥೆ ಇತ್ತು. ಇದರಿಂದ ಬಹಳಷ್ಟು ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಪ್ಪಿಗೆ ಪಡೆದು ಅಧಿಕೃತವಾಗಿ ಘೋಷಣೆ ಮಾಡಲು ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳ ಸಮರ್ಪಕ ಅನುಷ್ಠಾನ ಬಗ್ಗೆ ಚರ್ಚೆ ನಡೆಸಿದ ಸಚಿವರು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.