ಕಾರವಾರ: ಕಾರ್ಮಿಕ ಇಲಾಖೆಯ ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯ ಸೌಲಭ್ಯಗಳ ದುರ್ಬಳಕೆ ತಡೆಯಲು ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಲಾಖೆಯ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಹೊಸ ಗುರುತಿನ ಚೀಟಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 41 ವಿಭಾಗಗಳ ಅಸಂಘಟಿತ ಕಾರ್ಮಿಕರ ಪೈಕಿ 13 ವಿಭಾಗಗಳನ್ನು ಅಧಿಕೃತ ಎಂದು ಗುರುತಿಸಿದ್ದು, ಉಳಿದ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಡಿ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.