ದಾವಣಗೆರೆ: ಗ್ರಾಮ ಪಂಚಾಯಿತಿ ಪಿಡಿಒ ನಿರ್ಲಕ್ಷ್ಯಕ್ಕೆ ಇಬ್ಬರು ಪೌರಕಾರ್ಮಿಕರು ಬಲಿಯಾಗಿದ್ದಾರೆ. ಚರಂಡಿ ಸ್ವಚ್ಛಗೊಳಿಸುವಾಗ ವಿಷ ಗಾಳಿ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಪೌರಕಾರ್ಮಿಕರಾದ ದುಂಡಪ್ಪ(45), ನಾಗಪ್ಪ(42) ಮೃತಪಟ್ಟವರು ಎಂದು ಹೇಳಲಾಗಿದೆ. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಹೂಳು ತುಂಬಿಕೊಂಡಿದ್ದ ಚರಂಡಿ ಸ್ವಚ್ಛಗೊಳಿಸಲು ಬಸವನಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ ಪಾಟೀಲ ಸೂಚಿಸಿದ್ದರು. ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಚರಂಡಿಗೆ ಇಳಿಸಿದ್ದು, ಬಹುದಿನಗಳಿಂದ ತುಂಬಿಕೊಂಡಿದ್ದ ಚರಂಡಿ ಸ್ವಚ್ಛಗೊಳಿಸುವಾಗ ಉಸಿರು ಕಟ್ಟಿದೆ. ವಿಷ ಗಾಳಿ ಸೇವನೆಯಿಂದ ಪೌರಕಾರ್ಮಿಕರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.