ಮಡಿಕೇರಿ: ರಾಜ್ಯದಲ್ಲಿ ಕೋವಿಡ್-19 ರ 2 ನೇ ಅಲೆ ಕಾರಣ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ ಮುಖ್ಯಮಂತ್ರಿಯವರು 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ನೆರವಿನ ಮೊತ್ತ ಘೋಷಿಸಿದ್ದಾರೆ.
ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ 2,000 ರೂ. ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಲಾಗಿರುತ್ತದೆ. ನೆರವಿನ ಮೊತ್ತವನ್ನು ಪಡೆಯಲು ಅಗತ್ಯ ದಾಖಲೆಗಳೊಂದಿಗೆ https://sevasindhu.karnataka.gov.in/ ಪೋರ್ಟಲ್‍ನಲ್ಲಿ ಜುಲೈ 31 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹಿಂದಿನ ಮಾರ್ಗಸೂಚಿಯಂತೆ ನೆರವಿನ ಮೊತ್ತವನ್ನು ಪಡೆಯಲು ನಿಗದಿಪಡಿಸಿ ಅಧಿಕಾರಿಗಳಿಂದ ಅಥವಾ ಪತ್ರಾಂಖಿತ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪತ್ರವನ್ನು ಸಲ್ಲಿಸಲು ತಿಳಿಸಲಾಗಿದೆ. ಆದರೆ, ಉಚ್ಛ ನ್ಯಾಯಾಲಯದಲ್ಲಿ ನಡೆದ ನಡಾವಳಿಯಲ್ಲಿ ಗೃಹ ಕಾರ್ಮಿಕರಿಗೆ ಸಂಬಂಧಿಸಿದಂತೆ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಉದ್ಯೋಗ ದೃಢೀಕರಣ ಪತ್ರದಲ್ಲಿ ಗೃಹ ಕಾರ್ಮಿಕರು ವೃತ್ತಿ ನಿರ್ವಹಿಸುತ್ತಿರುವ ಮಾಲೀಕರಿಂದ ಸಹಿ ಪಡೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿರುತ್ತಾರೆ. ಅದರಂತೆ, ಗೃಹ ಕಾರ್ಮಿಕರಿಗೆ ಸಂಬಂಧಿಸಿದಂತೆ ಮಾತ್ರ ನಿಗಧಿಪಡಿಸಿದ ಅಧಿಕಾರಿಗಳಿಂದ ಅಥವಾ ಅವರು ಕಾರ್ಯ ನಿರ್ವಹಿಸುತ್ತಿರುವ ಮಾಲೀಕರಿಂದ ಸಹ ಸಹಿ ಮಾಡಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕಾಗಿ ಪ್ರತ್ಯೇಕ ನಮೂನೆಯ ಉದ್ಯೋಗ ದೃಢೀಕರಣ ಪ್ರಮಾಣ ಪತ್ರವನ್ನು ಹೊರಡಿಸಲಾಗಿದೆ. ಮತ್ತು ಮೊಬೈಲ್ ಸಂಖ್ಯೆ ನಮೂದಿಸುವುದನ್ನು ಐಚ್ಛಿಕಗೊಳಿಸಿದೆ. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಸಹಾಯವಾಣಿ 155214 ನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.