ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಶೌಚಗುಂಡಿ ಸ್ವಚ್ಛಗೊಳಿಸಲು ಕೆಳಗಿಳಿದ ಪೌರಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. 27 ವರ್ಷದ ಮಧು ಮೃತಪಟ್ಟವರು ಎಂದು ಹೇಳಲಾಗಿದೆ.
ಇಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣದಲ್ಲಿ ಮನೆಯೊಂದರ ಒಳಚರಂಡಿ ಕಟ್ಟಿಕೊಂಡಿದ್ದು, ಇದನ್ನು ಸರಿಪಡಿಸಲು ಪೌರಕಾರ್ಮಿಕರ ಸ್ಥಳಕ್ಕೆ ತೆರಳಿದ್ದರು. ಸ್ವಚ್ಛಗೊಳಿಸಲು ಶೌಚಗುಂಡಿಯೊಳಗೆ ಇಳಿದ ಮಧು ಮೃತಪಟ್ಟಿದ್ದಾರೆ.
ರಾಜೇಶ್ ಮತ್ತು ವಿಶ್ವಾಸ್ ಎಂಬುವವರು ಅಸ್ವಸ್ಥರಾಗಿದ್ದಾರೆ. ಮಧು ಮೃತದೇಹದೊಂದಿಗೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಪರಿಹಾರದ ಭರವಸೆ ನೀಡಿದ್ದಾರೆ. ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಶೌಚಗುಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರಗಳನ್ನು ಬಳಸಬೇಕೆಂದಿದ್ದರೂ, ಪೌರ ಕಾರ್ಮಿಕರನ್ನು ಬಳಸಿರುವುದು ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.