
ಬೆಂಗಳೂರು: ಪೇಂಟಿಂಗ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಸದಾಶಿವನಗರ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಕೈಲಾಸ್ ಮಹದೇವ(47) ಮೃತಪಟ್ಟ ವ್ಯಕ್ತಿ. ಮೂರು ವರ್ಷಗಳ ಹಿಂದೆ ಪುತ್ರನೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ಯಾಲೆಸ್ ಗ್ರೌಂಡ್ ನಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಅವರು ಇತರೆ ಕಾರ್ಮಿಕರೊಂದಿಗೆ ಅಲ್ಲೇ ವಾಸವಾಗಿದ್ದರು.
ಶುಕ್ರವಾರ ಗೇಟ್ ನಂಬರ್ ನಾಲ್ಕರಲ್ಲಿ ಪೇಂಟಿಂಗ್ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದಿದ್ದು, ಬೇರೆ ಕಾರ್ಮಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಲವಾದ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದಾಶಿವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.