ಪುಣೆ: ಒತ್ತಡದ ಬದುಕು, ಆಧುನಿಕ ಜೀವನ ಶೈಲಿ, ವಿಶ್ರಾಂತಿಯಿಲ್ಲದ ಕೆಲಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸಣ್ಣವಯಸ್ಸಿನಲ್ಲಿಯೇ ಸಾವು ಸಂಭವಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಟಾರ್ಗೆಟ್ ರೀಚ್ ಮಾಡುವ ಒತ್ತಡದಿಂದಾಗಿ ಒಲ್ಲೋರ್ವ ಚಾರ್ಟೆಡ್ ಅಕೌಂಟೆಂಟ್ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಪುಣೆಯ ಇವೈ ನಲ್ಲಿ ಉದ್ಯೋಗಿಯಾಗಿದ್ದ ಅನ್ನಾ ಸೆಬಾಸ್ಟಿಯನ್ ಎಂಬ 26 ವರ್ಷದ ಯುವತಿ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿದ್ದಾರೆ. ಈ ಬಗೆ ಅವರ ತಾಯಿ ಅನಿತಾ ಇವೈ ಇಂಡಿಯಾ ಅಧ್ಯಕ್ಷರಿಗೆ ಬರೆದಿರುವ ಇ-ಮೇಲ್ ಎಲ್ಲೆಡೆ ವೈರಲ್ ಆಗಿದೆ.
ಟಾರ್ಗೆಟ್ ರೀಚ್ ಮಾಡಬೇಕು ಎಂಬ ಒತ್ತಡದಲ್ಲಿ ತನ್ನ ಮಗಳು ಹಗಲು-ರಾತ್ರಿ ಎನ್ನದೇ ಹಲವು ದಿನಗಳಿಂದ ನಿರಂತರ ಕೆಲಸ ಮಾಡುತ್ತಿದ್ದಳು. ಕೆಲಸದ ಒತ್ತಡದಿಂದಾಗಿ ಮಗಳು ಸಾವನ್ನಪ್ಪಿದ್ದಾಳೆ ಎಂದು ಕಂಬನಿ ಮಿಡಿದಿದ್ದಾರೆ.
2023ರಲ್ಲಿ ಯುವತಿ ಅನ್ನಾ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮಾರ್ಚ್ 2024ರಲ್ಲಿ ಇವೈ ಪುಣೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಕೇವಲ ನಾಲ್ಕು ತಿಂಗಳಲ್ಲಿ ಅನ್ನಾ ಸಾವನ್ನಪ್ಪಿದ್ದಾರೆ. ಇವೈ ಕಂಪನಿ ವಿರುದ್ಧ ಅನ್ನಾ ತಾಯಿ ದೂರು ದಾಖಲಿಸಿದ್ದಾರೆ. ಕಂಪನಿಗೆ ಸೇರಿದ ಕೂಡಲೇ ಕೆಲಸದ ಹೊರೆ, ಟಾರ್ಗೆಟ್ ಒತ್ತಡ, ಕೆಲಸದ ಒತ್ತಡ, ಆತಂಕ, ನಿದ್ರಾಹೀನತೆ ಅನುಭವಿಸುತ್ತಿದ್ದರು. ಆದರೆ ಕಠಿಣ ಪರಿಶ್ರಮ ಯಶಸ್ಸಿಗೆ ದಾರಿ ಎಂಬುದನ್ನು ನಂಬುತ್ತಾ ನಿರಂತರ ಕೆಲಸ ಮಾಡುತ್ತಿದ್ದ ಮಗಳು ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾಳೆ ಎಂದು ಅನಿತಾ ದೂರು ನೀಡಿದ್ದಾರೆ.