
ಕೋವಿಡ್ ಬಂದಾಗಿನಿಂದಲೂ ವರ್ಕ್ ಫ್ರಂ ಹೋಂ ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿಬಿಟ್ಟಿದೆ. ಬಹುತೇಕ ಎಲ್ಲಾ ಸಂಸ್ಥೆಗಳು, ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ವರನೊಬ್ಬ ವರ್ಕ್ ಫ್ರಂ ಕಲ್ಯಾಣ ಮಂಟಪ ಮಾಡುತ್ತಿದ್ದು, ಈತನ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಮದುವೆಯ ದಿನವೂ ಕೆಲಸದ ಮುಳುಗಿರುವ ವರನೊಬ್ಬ ಮದುವೆ ಮಂಟಪದಲ್ಲಿ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ಇದಾಗಿದೆ. ಈ ಫೋಟೋವನ್ನು ‘ಕೋಲ್ಕತಾ ಇನ್‌ಸ್ಟಾಗ್ರಾಮರ್ಸ್’ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ.
ಈ ಫೋಟೋದಲ್ಲಿ ಕೋಲ್ಕತಾದ ವರನೊಬ್ಬ ಮಂಟಪದಲ್ಲಿ ಕುಳಿತಿರುವುದನ್ನು ನೋಡಬಹುದು. ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಂತೆ ಆತ ಲ್ಯಾಪ್‌ಟಾಪ್‌ನಲ್ಲಿ ಕೆಲಸದಲ್ಲಿ ಮಗ್ನನಾಗಿದ್ದಾನೆ. ಲ್ಯಾಪ್‌ಟಾಪ್‌ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಅಧಿಕೃತ ಕೆಲಸ ಎಂದು ಭಾವಿಸಲಾಗಿದೆ.
ಕೆಲವರು ಇದನ್ನು ನೋಡಿ ನಗುತ್ತಿದ್ದರೆ, ಇನ್ನು ಕೆಲವರು ಇದು ಹೆಮ್ಮೆಪಡುವ ವಿಷಯವಲ್ಲ ಎಂದಿದ್ದಾರೆ. ಕೆಲವರು ವೈರಲ್ಗೋಸ್ಕರ ಸುಮ್ಮನೆ ಪೋಸ್ ನೀಡಲಾಗಿದೆ ಎಂದೂ ಬರೆದಿದ್ದಾರೆ.