ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ಆವರಿಸಿದ ಬಳಿಕ ಲಕ್ಷಾಂತರ ಜನರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಉದ್ಯೋಗಿಗಳಿಗೆ ಅದೆಷ್ಟೋ ಬಾರಿ ಮುಜುಗರದ, ತಮಾಷೆಯ ಸನ್ನಿವೇಶಗಳು ಎದುರಾಗಿರುವುದಂತೂ ಸುಳ್ಳಲ್ಲ. ಆದರೆ, ಸ್ವತಃ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಇದರಿಂದ ಹೊರತಾಗಿಲ್ಲ.
ಹೌದು, ಪಿಚೈ ಅವರು ಟೆಕ್ ದೈತ್ಯ ಗೂಗಲ್ ಸಿಇಒ ಆಗಿರಬಹುದು. ಆದರೆ, ಅವರು ಕೂಡ ನಮ್ಮಂತೆಯೇ ಮನುಷ್ಯರು ತಾನೆ..? ಮರೆವು ಮನುಷ್ಯ ಸಹಜ ಗುಣ. ಅದರಂತೆ ಅವರು ವಿಡಿಯೋ ಕಾಲ್ ನಲ್ಲಿ ಇರುವಾಗ ಅನ್‌ಮ್ಯೂಟ್ ಮಾಡಲು ಮರೆತಿದ್ದಾರೆ.
ಇತ್ತೀಚೆಗೆ ಗೂಗಲ್ ಮೀಟ್‌ನಲ್ಲಿ ಮಪೆಟ್ಸ್‌ನ ಕೆರ್ಮಿಟ್ ದಿ ಫ್ರಾಗ್‌ನೊಂದಿಗೆ ಚಾಟ್ ಪ್ರಾರಂಭಿಸಿದಾಗ ಪಿಚೈ ಅವರಿಗೆ ಮುಜುಗರದ ಕ್ಷಣ ಎದುರಾಗಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡ ಅವರು, ಕೆಲವು ಆಸಕ್ತಿಗಳ ಕುರಿತು ಹಂಚಿಕೊಂಡಿದ್ದಕ್ಕೆ ಕೆರ್ಮಿಟ್ ದಿ ಫ್ರಾಗ್ ಗೆ ಧನ್ಯವಾದ ಹೇಳಿದ್ದಾರೆ. ಈ ವೇಳೆ ಅನ್‌ಮ್ಯೂಟ್ ಮಾಡಲು ಮರೆಯದಿರಿ ಎಂಬುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.
ಕೆರ್ಮಿಟ್ ಅವರ ಜೊತೆ ವಿಡಿಯೋ ಕರೆಯಲ್ಲಿ ಚರ್ಚಿಸುತ್ತಿದ್ದ ಸುಂದರ್ ಪಿಚೈ ಅವರು ಅನ್ ಮ್ಯೂಟ್ ಮಾಡಲು ಮರೆತಿದ್ದಾರೆ. ತನಗೇನು ಕೇಳಿಸುತ್ತಿಲ್ಲ ಎಂದು ಕೆರ್ಮಿಟ್ ಹೇಳಿದಾಗ, ಪಿಚೈ ಅವರಿಗೆ ಅನ್ ಮ್ಯೂಟ್ ಮಾಡದೇ ಇರುವುದು ಅರಿವಿಗೆ ಬಂದಿದ್ದು, ನಂತರ ಸರಿಪಡಿಸಿಕೊಂಡಿದ್ದಾರೆ. ಅಲ್ಲದೆ ಈ ವರ್ಷ ಕೆಲವು ಬಾರಿ ಈ ರೀತಿ ಮಾಡಿರುವುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.