ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರೊನಾ ಮಹಾಮಾರಿ ಜನರ ಜೀವನ ವಿಧಾನವನ್ನೇ ಬದಲಾಯಿಸಿದೆ. ಅವರಿಗೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಕಾರ್ಪೊರೇಟ್ ಉದ್ಯೋಗಿಗಳು ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪನಿಗಳು ‘ವರ್ಕ್ ಫ್ರಂ ಹೋಮ್’ ಸಂಸ್ಕೃತಿಗೆ ತಿಲಾಂಜಲಿ ಇತ್ತು ಈ ಮೊದಲಿನಂತೆ ಕಚೇರಿಗೆ ಬಂದು ಕಾರ್ಯ ನಿರ್ವಹಿಸಲು ತಮ್ಮ ಉದ್ಯೋಗಿಗಳಿಗೆ ಹೇಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ, ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಅಂಶ ಬೆಳಕಿಗೆ ಬಂದಿದ್ದು ಶೇಕಡಾ 62ರಷ್ಟು ಉದ್ಯೋಗಿಗಳು, ಕಾರ್ಪೊರೇಟ್ ಕಂಪನಿಗಳು ‘ವರ್ಕ್ ಫ್ರಮ್ ಹೋಮ್’ ಮುಂದುವರಿಸಿಕೊಂಡು ಹೋಗುವುದು ಬೆಸ್ಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವರ್ಕ್ ಫ್ರಮ್ ಹೋಮ್ ನಿಂದಾಗಿ ತಮ್ಮಗಳಿಗೆ ಕುಟುಂಬದ ಜೊತೆ ಹೆಚ್ಚಿನ ಸಮಯಾವಕಾಶ ಕಳೆಯಲು ಸಾಧ್ಯವಾಗುತ್ತಿದೆ. ಅಲ್ಲದೆ ಕಚೇರಿಗೆ ತೆರಳುವ ಧಾವಂತವಿಲ್ಲದೆ ಒತ್ತಡವೂ ಕಡಿಮೆಯಾಗಿದೆ. ಜೊತೆಗೆ ಟ್ರಾಫಿಕ್ ಕಿರಿಕಿರಿಯೂ ಇಲ್ಲ ಎಂಬ ಮಾತುಗಳು ಉದ್ಯೋಗಿಗಳಿಂದ ಕೇಳಿಬಂದಿದೆ.
BIG NEWS: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್
ಸಮೀಕ್ಷೆಯಲ್ಲಿ ಮತ್ತೊಂದು ಅಂಶವೂ ತಿಳಿದುಬಂದಿದ್ದು, ಶೇಕಡ 28ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಗೆ ತೆರಳಿ ಕೆಲಸ ಮಾಡಲು ಉತ್ಸುಕತೆ ಹೊಂದಿದ್ದರೆ, ಇನ್ನೂ ಶೇಕಡ 10 ಮಂದಿಯಂತೂ ತಾವು ಕಾಯಂ ಆಗಿ ಮನೆಯಿಂದಲೇ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ಆದರೆ ‘ವರ್ಕ್ ಫ್ರಮ್ ಹೋಮ್’ ಕುರಿತು ಈ ಹಿಂದಿನಿಂದಲೂ ಅಪಸ್ವರವೂ ಕೇಳಿಬರುತ್ತಿದ್ದು, ಕಂಪನಿಗಳು ಉದ್ಯೋಗಿಗಳಿಂದ ನಿಗದಿತ ಅವಧಿ ಮೀರಿಯೂ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮಗೆ ಒತ್ತಡವಾಗುತ್ತಿದೆ ಎಂದು ಹಲವು ಉದ್ಯೋಗಿಗಳು ಈ ಹಿಂದೆ ಹೇಳಿಕೊಂಡಿದ್ದರು.