
ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಂತನು ದೇಶಪಾಂಡೆ ಇಂಥದೊಂದು ಸಲಹೆ ನೀಡಿ ಇದೀಗ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ನಲ್ಲಿ ಸುಧೀರ್ಘ ಪೋಸ್ಟ್ ಹಾಕಿದ್ದ ಶಂತನು ದೇಶಪಾಂಡೆ, ಚೆನ್ನಾಗಿ ತಿಂದು ಫಿಟ್ ಆಗಿರಿ. ಜೊತೆಗೆ ಹೊಸದಾಗಿ ಉದ್ಯೋಗಕ್ಕೆ ಸೇರಿದ ಬಳಿಕ ಕನಿಷ್ಠ ನಾಲ್ಕರಿಂದ ಐದು ವರ್ಷಗಳ ಕಾಲ ಪ್ರತಿನಿತ್ಯ 18 ಗಂಟೆ ಕೆಲಸ ಮಾಡಿ ಎಂದಿದ್ದರು.
ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ ನೆಟ್ಟಿಗರು, ನಿಮ್ಮಂಥವರಿಂದಲೇ ಉದ್ಯೋಗಿಗಳು ಕೆಲಸ ಬಿಡುವಂತಾಗಿದೆ. ಒತ್ತಡ ಹೇರುವ ಮೂಲಕ ಅವರ ನೆಮ್ಮದಿಯನ್ನೇ ಹಾಳು ಮಾಡುತ್ತೀರಿ ಎಂದು ಹೇಳಿದ್ದಾರೆ. ಒಬ್ಬರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 18 ಗಂಟೆ ಸಾಕಾ ? 24 ಗಂಟೆ ಬೇಡವಾ ? ಎಂದು ವ್ಯಂಗ್ಯವಾಡಿದ್ದಾರೆ.