ಮಡಿಕೇರಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ, ಕೊಡಗು ಜಿಲ್ಲೆಯ ಸಂಯುಕ್ತಾಶ್ರಯದಲ್ಲಿ ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಬುಧವಾರ “ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು” ಎನ್ನುವ ಧ್ಯೇಯ ದೊಂದಿಗೆ ವಿಶ್ವ ಆಹಾರ ದಿನಾಚರಣೆ ನಡೆಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಆಹಾರದ ಕೊರತೆಯಿಂದ ಉಲ್ಬಣಿಸಿರುವ ಹಸಿವಿನ ಜಾಗತಿಕ ಸಮಸ್ಯೆ ನಿವಾರಿಸುವಲ್ಲಿ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದರು.
ಆಹಾರ ಪೋಲು-ರಾಷ್ಟ್ರೀಯ ನಷ್ಟ, ನಾವು ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಆಹಾರ ಸಂರಕ್ಷಣೆ ಕುರಿತು ಹೆಚ್ಚಿನ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಆಹಾರ ಅಪವ್ಯಯವನ್ನು ತಡೆಗಟ್ಟಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದರು.
ಒಮ್ಮೆ ಆಹಾರದ ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಪ್ರತಿಯೊಬ್ಬರೂ ಆಹಾರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವಿಶ್ವಾದ್ಯಂತ ಇಂದಿಗೂ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆ ನಾವು ಪೋಲು ಮಾಡುತ್ತಿರುವ ಆಹಾರದ ಪ್ರಮಾಣವನ್ನು ತಗ್ಗಿಸಿ ಉತ್ತಮ ಭವಿಷ್ಯಕ್ಕಾಗಿ ಆಹಾರವನ್ನು ಸಂರಕ್ಷಿಸಬೇಕು ಎಂದು ಬೇಬಿಮ್ಯಾಥ್ಯೂ ಹೇಳಿದರು.ವಿಶ್ವ ಆಹಾರ ದಿನದ ಮಹತ್ವದ ಕುರಿತು ಮಾಹಿತಿ ನೀಡಿ ಆಹಾರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಕೂಡುಮಂಗಳೂರು ಸಕರ್ಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಆಹಾರದ ಕೊರತೆಯಿಂದ ಉಲ್ಬಣಿಸಿರುವ ಹಸಿವು ಎಂಬುದು ಇಂದು ಜಾಗತಿಕ ಸಮಸ್ಯೆಯಾಗಿದೆ. ಈ ಜಾಗತಿಕ ಹಸಿವು ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಆಹಾರದ ಹಕ್ಕು ಪ್ರತಿಯೊಬ್ಬರ ಹಕ್ಕು ಆಗಿದೆ. ನಮಗೆ ತಿನ್ನುವ ಹಕ್ಕಿದೆ. ಆದರೆ, ನಮಗೆ ಬಿಸಾಡುವ ಹಕ್ಕು ಇಲ್ಲ. ಮಾನವನ ಅಭಿವೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ ಎಂದರು.
ಆಹಾರ ಪೋಲು ಮಾಡದಿರಿ: ನಾವು ಆಹಾರವನ್ನು ಪೋಲು ಮಾಡದೇ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಆಹಾರವನ್ನು ಸಂರಕ್ಷಿಸಬೇಕು ಎಂದರು.
ಕೊಡಗಿನ ಕುಶಾಲನಗರದಲ್ಲಿ ಎನ್.ಕೆ.ಮೋಹನ್ ಕುಮಾರ್ ನೇತೃತ್ವದಲ್ಲಿ 15 ವರ್ಷಗಳ ಹಿಂದೆ ಆರಂಭಗೊಂಡ ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನವು ಇಂದು ಬೆಂಗಳೂರು ಮತ್ತಿತರ ಕಡೆಗಳಲ್ಲಿ ವ್ಯಾಪಕವಾಗಿ ವಿಸ್ತೃತಗೊಂಡು ಆಹಾರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.