ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಅನಿವಾರ್ಯ. ವಿಪರೀತ ಥಂಡಿ ಇರುವ ಜಾಗಗಳಲ್ಲಂತೂ ಉಣ್ಣೆಯ ಸ್ವೆಟರ್, ಟೋಪಿ, ಕೈಗವಸುಗಳು, ಸಾಕ್ಸ್ ಇವನ್ನೆಲ್ಲ ಧರಿಸಿಯೇ ಇರಬೇಕಾಗುತ್ತದೆ. ಸಾಮಾನ್ಯವಾಗಿ ಚಳಿ ಜಾಸ್ತಿಯಿದ್ದಾಗ ಎಲ್ಲರೂ ಹೈನೆಕ್ ಸ್ವೆಟರ್‌ಗಳನ್ನು ಹಾಕಿಕೊಳ್ಳಲು ಬಯಸುತ್ತಾರೆ.
ಉಣ್ಣೆಯ ಹೈ ನೆಕ್ ಸ್ವೆಟರ್‌ಗಳು ಶೀತದಿಂದ ನಮ್ಮನ್ನು ರಕ್ಷಿಸುತ್ತವೆ. ಆದರೆ ಈ ಸ್ವೆಟರ್‌ಗಳಿಂದ ಕುತ್ತಿಗೆಯ ಸುತ್ತ ತುರಿಕೆ ಪ್ರಾರಂಭವಾಗುತ್ತದೆ. ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರಿಗಂತೂ ಈ ಸಮಸ್ಯೆ ಸರ್ವೇಸಾಮಾನ್ಯ. ಅವರಿಗೆ ಹೈನೆಕ್ ಸ್ವೆಟರ್ ಧರಿಸುವುದರಿಂದ ಚರ್ಮದ ಮೇಲೆ ದದ್ದುಗಳು, ಕಲೆಗಳು, ಮೊಡವೆಗಳು, ಡ್ರೈನೆಸ್ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ.
ಈ ರೀತಿ ಉಣ್ಣೆಯ ಸ್ವೆಟರ್‌ನಿಂದ ಅಲರ್ಜಿ ಅಥವಾ ತುರಿಕೆ ಸಮಸ್ಯೆ ಹೊಂದಿರುವವರು ಕೆಲವೊಂದು ಸುಲಭದ ಪರಿಹಾರಗಳನ್ನು ಪ್ರಯತ್ನಿಸಬೇಕು. ಚರ್ಮ ಶುಷ್ಕವಾಗಿದ್ದಲ್ಲಿ ಆ ಜಾಗಕ್ಕೆ ಹಾಲಿನ ಕೆನೆ ಅನ್ವಯಿಸಬಹುದು. ತಕ್ಷಣದ ಪರಿಹಾರವನ್ನು ಪಡೆಯಲು ಆಂಟಿ-ಇಚ್ ಲೋಷನ್ ಅನ್ನು ಸಹ ಹಚ್ಚಿಕೊಳ್ಳಿ. ಈ ಲೋಷನ್ ಹಿತವಾದ ಪರಿಣಾಮವನ್ನು ಹೊಂದಿರುತ್ತದೆ. ಇದು ತುರಿಕೆ ಕಡಿಮೆ ಮಾಡುತ್ತದೆ.
ಚಳಿಗಾಲದಲ್ಲಿ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ಒಣ ಚರ್ಮದ ಮೇಲೆ ಹೈನೆಕ್ ಉಣ್ಣೆಯ ಬಟ್ಟೆ ತಾಕಿದಾಗ ಆ ಜಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ತುರಿಕೆ ಪ್ರಾರಂಭವಾಗುತ್ತದೆ. ಹಾಗಾಗಿ ಹೈನೆಕ್ ಸ್ವೆಟರ್ ಧರಿಸುವ ಮೊದಲು ಕುತ್ತಿಗೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಚರ್ಮ ಹೈಡ್ರೇಟ್ ಆಗಿದ್ದರೆ ಹೆಚ್ಚು ತುರಿಕೆಯಾಗುವುದಿಲ್ಲ.
ಹೈನೆಕ್ ಸ್ವೆಟರ್ ಧರಿಸಿದಾಗ ಕಿರಿಕಿರಿ ಆದಂತಾದರೂ ಸುಮ್ಮನಿರಬೇಕು. ಪದೇ ಪದೇ ತುರಿಸಿಕೊಳ್ಳಬಾರದು. ವಿಪರೀತ ತುರಿಸಿಕೊಂಡರೆ ಅಲ್ಲೇ ಕೆಂಪಗಾಗಿ ರಕ್ತ ಕೂಡ ಬರಬಹುದು. ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಂತೂ ಈ ರೀತಿ ತುರಿಸಿ ಗಾಯ ಮಾಡಿಕೊಳ್ಳಬಾರದು.