ಏಷ್ಯಾಕಪ್ ಮಹಿಳೆಯರ ಹಾಕಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಭಾರತೀಯ ವನಿತೆಯರ ತಂಡವು ಕಂಚಿಗಾಗಿ ಪೈಪೋಟಿ ನಡೆಸಲಿದೆ.
ಟೂರ್ನಿಯ ಆರಂಭದಲ್ಲಿ ಭಾರತೀಯ ಮಹಿಳೆಯರ ತಂಡ ಉತ್ತಮ ಪ್ರದರ್ಶನವನ್ನೇ ತೋರಿಸಿತ್ತು. ಮಲೇಷ್ಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿಸಿತ್ತು. ಮಲೇಷ್ಯಾ ತಂಡವನ್ನು ಬರೋಬ್ಬರಿ 9-0 ಅಂತರದಲ್ಲಿ ಸೋಲಿಸಿ ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿತ್ತು.
ಆದರೆ, ನಂತರ ನಡೆದಿದ್ದ ಎರಡನೇ ಪಂದ್ಯದಲ್ಲಿ 0-2 ಅಂತರದಲ್ಲಿ ಸೋಲು ಕಂಡು, ಮತ್ತೆ ಮೂರನೇ ಪಂದ್ಯದಲ್ಲಿ ಸಿಂಗಪುರ ತಂಡವನ್ನು 9-1ರಿಂದ ಸೋಲಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿತ್ತು. ಆದರೆ, ಇನ್ನೊಂದು ಹೆಜ್ಜೆ ಇದೆ ಎನ್ನುವಷ್ಟರಲ್ಲಿಯೇ ಕೊರಿಯಾ ವಿರುದ್ಧ 2-3ರಲ್ಲಿ ಕೂದಲೆಳೆಯಲ್ಲಿ ಸೋಲು ಕಂಡಿತು.
ಹೀಗಾಗಿ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸುತ್ತಿದೆ. ಸೆಮಿಫೈನಲ್ ನಲ್ಲಿ ಭಾರತ ಮಹಿಳೆಯರ ತಂಡವು ಚೀನಾ ಮಹಿಳೆಯರ ವಿರುದ್ಧ ಕಂಚಿಗಾಗಿ ಶುಕ್ರವಾರ ಸೆಣಸಾಟ ನಡೆಸಲಿದೆ. ಎರಡೂ ತಂಡಗಳನ್ನು ಗಮನಿಸುವುದಾದರೆ, ಚೀನಾಕ್ಕಿಂತ ಭಾರತ ತಂಡವೇ ಬಲಿಷ್ಠವಾಗಿ ಕಾಣುತ್ತಿದೆ. ಹೀಗಾಗಿ ಭಾರತ ತಂಡ ಕಂಚಿನ ಪದಕವನ್ನಾದರೂ ಗೆಲ್ಲಲಿ ಎಂಬುವುದು ಎಲ್ಲರ ಆಶಯವಾಗಿದೆ.
ಟೋಕಿಯ ಒಲಿಂಪಿಕ್ಸ್ ನಲ್ಲಿ ಕೂಡ ಭಾರತೀಯ ಮಹಿಳೆಯರ ಹಾಕಿ ತಂಡ ಉತ್ತಮ ಪ್ರದರ್ಶನ ತೋರಿಸಿತ್ತು. ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು 10ನೇ ಸ್ಥಾನದಲ್ಲಿದೆ.