ಗರ್ಭಾವಸ್ಥೆಯನ್ನು ಮುಂದುವರಿಸಬೇಕೇ ಬೇಡವೇ ಎಂದು ನಿರ್ಧರಿಸುವ ಮಹಿಳೆಯ ಅಧಿಕಾರವನ್ನು ಕಸಿದುಕೊಳ್ಳುವುದು ಸೂಕ್ತವಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಮಾನಸಿಕ ಅಸ್ವಸ್ಥೆಯ ಗರ್ಭದಲ್ಲಿದ್ದ 22 ವಾರದ ಅಸಹಜ ಭ್ರೂಣವನ್ನು ಗರ್ಭಪಾತ ಮಾಡಲು ಅವಕಾಶ ಮಾಡಿಕೊಟ್ಟಿದೆ.
ವೈದ್ಯರು ನೀಡಿರುವ ವರದಿಯಲ್ಲಿ ಗರ್ಭಿಣಿಯು ಸೌಮ್ಯವಾಗಿ ಮಾನಸಿಕ ಅಸ್ವಸ್ಥೆಯಾಗಿದ್ದಳು ಹಾಗೂ ಈಕೆಯ ಹೊಟ್ಟೆಯಲ್ಲಿದ್ದ ಮಗುವು ಕ್ಲೈನ್ಫೆಲ್ಟರ್ ಸಿಂಡ್ರೋಮ್ನಿಂದ ಬಳಲುತ್ತಿತ್ತು. ಈ ಪರಿಸ್ಥಿತಿಯಲ್ಲಿ ಗಂಡು ಮಗುವು ಹೆಚ್ಚುವರಿ ಎಕ್ಸ್ ಕ್ರೋಮೋಸೋಮ್ಗಳನ್ನು ಹೊಂದಿರುತ್ತದೆ.
ವೈದ್ಯಕೀಯ ವರದಿಯ ಪ್ರಕಾರ, ಗರ್ಭಿಣಿಯು ಮಾನಸಿಕ ನ್ಯೂನ್ಯತೆಯ ಜೊತೆಯಲ್ಲಿ, ದೃಷ್ಟಿ ಸಮಸ್ಯೆ, ದೇಹದ ಎಡಭಾಗದಲ್ಲಿ ಅಂಗಗಳು ದುರ್ಬಲವಾಗಿದ್ದವು. ಕ್ಲೈನ್ಫೆಲ್ಟರ್ ಸಿಂಡ್ರೋಮ್ ಅಂತಹ ಅಪಾಯಕಾರಿ ಅಲ್ಲದೇ ಇದ್ದರೂ ಸಹ ದಿವ್ಯಾಂಗ ಗರ್ಭಿಣಿಗೆ ಮಗುವಿನ ಪಾಲನೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಕೇರಳ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.