
ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಫೋಟೋವನ್ನ ಪ್ರೊಫೈಲ್ ಚಿತ್ರ ಅಥವಾ ಡಿಪಿಯಾಗಿ ಬಳಸದಂತೆ ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎ ಎಸ್ ಕುಮಾರಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಫೋಟೋಗಳನ್ನ ಸೈಬರ್ ಅಪರಾಧಿಗಳು ಮಾರ್ಫಿಂಗ್ ಮಾಡಲು ಬಳಸಬಹುದು ಎಂದು ಸಂವಾದವೊಂದರಲ್ಲಿ ಹೇಳಿದ್ದಾರೆ.
ಚೆನ್ನೈನ ತೊಂಡಿಯಾರ್‌ಪೇಟ್‌ನಲ್ಲಿರುವ ಆಸ್ಪತ್ರೆಯಲ್ಲಿ ತಮಿಳುನಾಡು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಗಳು ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ಹಕ್ಕುಗಳು ಮತ್ತು ಸಬಲೀಕರಣದ ವಿಚಾರ ಸಂಕಿರಣದಲ್ಲಿ ಮಾತನಾಡಿ, ತಂತ್ರಜ್ಞಾನವು ಒಳ್ಳೆಯದು ಮತ್ತು ಕೆಟ್ಟದ್ದಾಗಿರುತ್ತದೆ. ಆದ್ದರಿಂದ ಜಾಗರೂಕರಾಗಿರಬೇಕು ಎಂದು ಹೇಳಿದರು.
ಸೈಬರ್ ಕ್ರಿಮಿನಲ್‌ಗಳು ಮಾರ್ಫಿಂಗ್ ಮಾಡುತ್ತಿರುವುದರಿಂದ ನಿಮ್ಮ ಚಿತ್ರವನ್ನು ಡಿಪಿಯಾಗಿ ಇಟ್ಟುಕೊಳ್ಳಬೇಡಿ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರ ಜೊತೆಗೆ ಪ್ರೀತಿಯಲ್ಲಿ ಬೀಳುವುದು ವೈಯಕ್ತಿಕ ಹಕ್ಕು, ಆದರೆ ಅವರು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಸೈಬರ್ ಕ್ರೈಮ್‌ಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೆ ಬಂದಿರುವ ದೂರುಗಳ ಸಂಖ್ಯೆಯ ಕುರಿತು ಪ್ರತಿಕ್ರಿಯಿಸಿ, ಮಹಿಳೆಯರು ಇನ್ನೂ ಮುಂದೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಸಮಸ್ಯೆಗೆ ಆಯೋಗವನ್ನು ಸಂಪರ್ಕಿಸಲು ಭಯಪಡಬೇಡಿ ಎಂದು ಹೇಳಿದರು.