ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಎಸ್‌ಪಿ ಕಚೇರಿ ಬಾಲಿವುಡ್ ಸಿನಿಮಾ ಕಥೆಯನ್ನೂ ಮೀರಿಸುವ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ತಮ್ಮಿಬ್ಬರಿಗೂ ಒಬ್ಬನೇ ಗಂಡ ಎಂದು ತಿಳಿದ ಬಳಿಕ ಇಬ್ಬರು ಮಹಿಳೆಯರು ತಮ್ಮ ಪತಿ ವಿರುದ್ಧ ಏಕಕಾಲದಲ್ಲಿ ಜಂಟಿಯಾಗಿ ವರದಕ್ಷಿಣೆ ಕಿರುಕುಳದ ವಿರುದ್ಧ ದೂರು ನೀಡಲು ಮುಂದಾದರು. ಪರಸ್ಪರರ ಪ್ರಕರಣಗಳನ್ನು ಆಲಿಸಿದ ನಂತರ ಅವರು ನಮ್ಮಿಬ್ಬರಿಗೂ ಗಂಡನಾಗಿರುವ ವ್ಯಕ್ತಿ ಒಬ್ಬನೇ ಎಂಬುದನ್ನು ಅರಿತು ‘ಶತ್ರುವಿನ ಶತ್ರು ಮಿತ್ರ’ ಎಂದು, ಇಬ್ಬರೂ ಕೈಜೋಡಿಸಿ ಗಂಡನ ವಿರುದ್ಧ ಜಂಟಿ ದೂರು ದಾಖಲಿಸಿದರು.
ಆರೋಪಿತ ವ್ಯಕ್ತಿ ಗ್ವಾಲಿಯರ್ ನಿವಾಸಿ. ವರದಕ್ಷಿಣೆ ಕೊಡಲಿಲ್ಲವೆಂದು ಮೊದಲ ಹೆಂಡತಿಯನ್ನು ಹೊರಹಾಕಿದ ನಂತರ ಅವನು ಎರಡನೇ ಮದುವೆಯಾಗಿದ್ದ.
ಗಂಡನಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ್ದಾಗಿ ಇಬ್ಬರೂ ಪತ್ನಿಯರು ಆರೋಪಿಸಿದ್ದಾರೆ. ಪತಿಯ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಆತ ಇಬ್ಬರನ್ನೂ ತ್ಯಜಿಸಿದ್ದ. ವರದಕ್ಷಿಣೆ ಹಣ ನೀಡದ ಕಾರಣ ಪತ್ನಿಯರಿಬ್ಬರಿಗೂ ತಮ್ಮ ಗಂಡ ಕಿರುಕುಳ ನೀಡಿ ಹಲ್ಲೆ ನಡೆಸಿದ್ದ ಎಂದು ಮಾಹಿತಿ ನೀಡಿದ್ದಾರೆ.
ಗ್ವಾಲಿಯರ್ ಜಿಲ್ಲೆಯ ನಿವಾಸಿ ಉಪದೇಶ್ ರಾಥೋಡ್ ಉತ್ತರಾಂಚಲದ ನಿಶಾ ರಾಥೋಡ್ ಅವರನ್ನು ಮೊದಲು ವಿವಾಹವಾದರು. ಮಾಹಿತಿಯ ಪ್ರಕಾರ, ನಿಶಾ ಮಾರ್ಚ್ 5, 2019 ರಂದು ಉಪದೇಶ್ ಅವರನ್ನು ವಿವಾಹವಾದರು, ಅವರಿಗೆ 2021 ರಲ್ಲಿ ಮಗ ಜನಿಸಿದ. ಕೋವಿಡ್ 19 ಸಮಯದಲ್ಲಿ ನಿಶಾ ವರದಕ್ಷಿಣೆ ಹಣವನ್ನು ನೀಡಲು ನಿರಾಕರಿಸಿದಾಗ ಉಪದೇಶ್ ಕಿರುಕುಳ ನೀಡಲು ಮತ್ತು ದೈಹಿಕವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದ.
ಈ ಜಗಳದಿಂದಾಗಿ ನಿಶಾ ಗಂಡನ ಮನೆಯಿಂದ ಹೊರಹಾಕಲ್ಪಟ್ಟಳು. ಉಪದೇಶ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ನಿಶಾ ಕುಟುಂಬ ನ್ಯಾಯಾಲಯದಲ್ಲಿ ಜೀವನಾಂಶ ಪ್ರಕರಣವನ್ನು ದಾಖಲಿಸಿತು. ಕೌಟುಂಬಿಕ ನ್ಯಾಯಾಲಯವು ಉಪದೇಶ್ ವಿರುದ್ಧದ ತೀರ್ಪಿನಲ್ಲಿ ವಿಚ್ಛೇದನ ನೀಡದೆ ಪತ್ನಿಗೆ ಮಾಸಿಕ ಭತ್ಯೆಯಾಗಿ 6,000 ರೂ. ನೀಡುವಂತೆ ಆದೇಶಿಸಿಸಿತು.
ಈ ಪ್ರಕರಣ ಬಳಿಕ ರಾಥೋಡ್ ಪ್ರಿಯಾಂಕಾ ರಾಥೋಡ್ ಳನ್ನು ಎರಡನೇ ಹೆಂಡತಿಯಾಗಿ ಸ್ವೀಕರಿಸಿದ. ಆಕೆ ಗ್ವಾಲಿಯರ್ ಜಿಲ್ಲೆಯ ನಿವಾಸಿ. ಇಬ್ಬರೂ ಮೇ 1, 2023 ರಂದು ವಿವಾಹವಾದರು. ನವೆಂಬರ್ 20 ರಂದು ಆರೋಪಿ ಮತ್ತು ಅವನ ಕುಟುಂಬವು ವರದಕ್ಷಿಣೆಯ ನೆಪದಲ್ಲಿ ಪ್ರಿಯಾಂಕಾ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು. ಆಕೆ ವಿರೋಧಿಸಿದಾಗ ಮನೆಯವರು ಆಕೆಯನ್ನು ಮನೆಯಿಂದ ಹೊರ ಹಾಕಿದ್ದರು. ಹಲ್ಲೆ ವೇಳೆ ಪ್ರಿಯಾಂಕಾ ತನ್ನ ಪತಿಗೆ ಈಗಾಗಲೇ ಮದುವೆಯಾಗಿ ಮಗುವಿದೆ ಎಂಬುದನ್ನ ತಿಳಿದುಕೊಂಡಳು. ಹತಾಶಳಾದ ಆಕೆ ಕಿರುಕುಳ ಮತ್ತು ವಂಚನೆ ಬಗ್ಗೆ ದೂರು ನೀಡಲು ಕುಟುಂಬ ಸಮೇತ ಪೊಲೀಸ್ ಠಾಣೆಗೆ ಹೋದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಬಳಿಕ ಆಕೆ ಗ್ವಾಲಿಯರ್‌ನಲ್ಲಿರುವ ಎಸ್‌ಪಿ ಕಚೇರಿಗೆ ರಾಥೋಡ್ ವಿರುದ್ಧ ದೂರು ನೀಡಲು ಬಂದಾಗ, ಅವನ ಮೊದಲ ಪತ್ನಿ ನಿಶಾ ಅವರ ಪರಿಚಯವಾಗಿದೆ. ಪರಸ್ಪರ ಮಾತನಾಡಿದ ಇಬ್ಬರೂ ತಮ್ಮಿಬ್ಬರ ಗಂಡ ಒಬ್ಬನೇ ಎಂಬುದನ್ನು ಕಂಡುಕೊಂಡ ಬಳಿಕ ಪತಿಯ ವಿರುದ್ಧ ಜಂಟಿ ದೂರು ದಾಖಲಿಸಿದ್ದಾರೆ. ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.