ಬೆಂಗಳೂರು: ರಾಜ್ಯದಲ್ಲಿಯೂ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.
ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ ಆರು ದಿನ ವೇತನ ಸಹಿತ ಮುಟ್ಟಿನ ರಚನೆ ನೀಡುವ ಸಾಧ್ಯತೆಗಳ ಪರಿಶೀಲಿಸಲು ರಚಿಸಲಾಗಿದ್ದ ಡಾ. ಸಪ್ನಾ ಮುಖರ್ಜಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರ ಆಧಾರದ ಮೇಲೆ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಖಾಸಗಿ ವಲಯಕ್ಕೆ ಮುಟ್ಟಿನ ರಜೆ ನೀತಿ ಪರಿಚಯಿಸಲಿದ್ದು, ಪೂರ್ಣ ಪ್ರಮಾಣದಲ್ಲಿ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಮುಟ್ಟಿನ ರಜೆ ವಿಚಾರವಾಗಿ ಸರ್ಕಾರಗಳು ನೀತಿ ರೂಪಿಸುವ ಅಗತ್ಯತೆ ಕುರಿತಾಗಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
1992 ರಲ್ಲಿ ದೇಶದಲ್ಲಿ ಮೊದಲಿಗೆ ಬಿಹಾರದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಿಸಲಾಗಿತ್ತು. ಅಲ್ಲಿ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆ ಸೌಲಭ್ಯ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳದಲ್ಲಿಯೂ ಕೆಲವು ನಿಬಂಧನೆಗಳೊಂದಿಗೆ ಮುಟ್ಟಿನ ರಜೆ ನೀಡಲಾಗುತ್ತದೆ. ರಾಜ್ಯದಲ್ಲಿಯೂ ಜಾರಿಗೊಳಿಸಲು ನೀತಿ ರೂಪಿಸಲಾಗುವುದು ಎಂದು ಹೇಳಲಾಗಿದೆ.