
ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಜನರಿಗೆ ಇದ್ರಿಂದ ಅತ್ಯಧಿಕ ಮನರಂಜನೆ ಸಿಗ್ತಿದೆ. ರೀಲ್ಸ್ ನೋಡ್ತಾ ಇದ್ರೆ ಟೈಂ ಹೋಗಿದ್ದು ತಿಳಿಯೋದಿಲ್ಲ. ಇದೇ ರೀಲ್ಸ್, ಯುಟ್ಯೂಬ್ ವಿಡಿಯೋಗಳು ಅನೇಕರ ಖಾತೆ ತುಂಬಿಸಿವೆ.
ಜನರಿಗೆ ಮನರಂಜನೆ ನೀಡುವ ಮೂಲಕ ಅನೇಕರು ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಕೆಲಸಕ್ಕೆ ಹೋಗಿ ಟೆನ್ಷನ್ ನಲ್ಲಿ ಕೆಲಸ ಮಾಡುವ ಬದಲು ರೀಲ್ಸ್ ಮೂಲಕ ಹಣ ಸಂಪಾದನೆ ಮಾಡೋದು ಸುಲಭ ಎಂದು ಅನೇಕರು ಭಾವಿಸಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಈ ಹುಡುಗಿ ಹೇಳೋದನ್ನು ಕೇಳಿ.
ಈಕೆ ಹೆಸರು ಅನ್ನಾ ವೋಲ್ಫರ್‌ಮ್ಯಾನ್. ವಯಸ್ಸು 22. ನ್ಯೂಯಾರ್ಕ್ ನಿವಾಸಿ. 2020ರಲ್ಲಿ ಮೊದಲ ಬಾರಿ ರೀಲ್ಸ್ ಮಾಡೋಕೆ ಶುರು ಮಾಡಿದ್ದಳು. ಆಕೆ ಟಿಕ್‌ಟಾಕ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾಳೆ. ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾಳೆ. ಎಲ್ಲ ಬಂದಿದ್ದು ಈ ವಿಡಿಯೋಗಳಿಂದ.
ಜೀವನಶೈಲಿ, ಪ್ರಯಾಣ ಮತ್ತು ಆಹಾರದ ವಿಡಿಯೋ ಮಾಡುವ ಅನ್ನಾಗೆ ಇಷ್ಟು ಹಣ ಬರ್ತಿದ್ದರೂ ಸಮಾಧಾನವಿಲ್ಲ. ರೀಲ್ಸ್, ಟಿಕ್ ಟಾಕ್ ವಿಡಿಯೋಗಳು ತನ್ನನ್ನು ನಾರ್ಸಿಸಿಸಂಗೆ ಬಲಿಯಾಗಿಸಿವೆ ಎಂದು ಅನ್ನಾ ಹೇಳಿದ್ದಾಳೆ. ವಿಡಿಯೋಕ್ಕೆ ಆಕೆ ಜೀವನ ಸೀಮಿತವಾಗಿದೆ. ಜನರು ನನ್ನನ್ನು ನೋಡ್ತಾರೆಯೇ ವಿನಃ ನನ್ನ ವಿಷ್ಯವನ್ನಲ್ಲ ಎಂಬುದು ಅನ್ನಾ ಅರಿವಿಗೆ ಬಂದಿದೆ.
ಇದ್ರಲ್ಲಿ ಹೊಸತನ್ನು ಕಲಿಯಲು ಸಾಧ್ಯವಾಗ್ತಿಲ್ಲ. ನನ್ನ ಮನಸ್ಸು ಸೀಮಿತವಾಗಿದೆ. ಇದು ನಾನು ಬಯಸುತ್ತಿರುವ ಜೀವನವಲ್ಲ ಎಂದಿದರು ಅನ್ನಾ, ಭವಿಷ್ಯದಲ್ಲಿ ವಿಡಿಯೋ ಮಾಡೋದನ್ನು ಮುಂದುವರೆಸ್ತೇನಾದ್ರೂ ನನಗೊಂದು ಕೆಲಸ ಹುಡುಕುತ್ತೇನೆ ಎಂದಿದ್ದಾಳೆ. ಕಾರ್ಪೋರೇಟ್ ಕೆಲಸದ ಹುಡುಕಾಟ ನನ್ನ ಗುರಿ. ನಾನದರಲ್ಲಿ ಹೆಚ್ಚು ಸಂತೋಷವಾಗಿರುತ್ತೇನೆಂಬ ನಂಬಿಕೆ ಇದೆ ಎಂದಿದ್ದಾಳೆ.