ಉಡುಪಿ: ವಿಷ ಸೇವಿಸಿ ಯುವತಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಕುಂದಾಪುರ ಬಳಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎಂಬ ಯುವತಿ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು. ಅದಾಗಲೇ ವಿವಾಹವಾಗಿದ್ದ ಮುಡುಗೋಪಾಡಿ ಅಜೀಜ್ ಎಂಬಾತನ ಜತೆ ಎರಡು ಮೂರು ವರ್ಷಗಳಿಂದ ಸ್ನೇಹದಿಂದ ಇದ್ದ ಶಿಲ್ಪಾಳನ್ನು ನಂಬಿಸಿ ತನ್ನ ಫ್ಲಾಟ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ ಆಕೆಯ ಕೆಲ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಅಜೀಜ್ ಬಳಿಕ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಮದುವೆಯಾಗುವಂತೆ ಒತ್ತಾಯಿಸಿದ್ದನಲ್ಲದೇ ಆತನ ಪತ್ನಿ ಕೂಡ ಅಜೀಜ್ ನನ್ನು ಮದುವೆಯಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ.
ಅಜೀಜ್ ನ ಬ್ಲಾಕ್ ಮೇಲ್, ಮತಾಂತರ ಯತ್ನ, ಕಿರುಕುಳಕ್ಕೆ ಬೇಸತ್ತು ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಲ್ಪಾ ಸಾವಿನ ಹಿಂದೆ ಲವ್ ಜಿಹಾದ್ ಕೈವಾಡವಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಆರೋಪಿ ಅಜೀಜ್ ನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.