ಮಾರಣಾಂತಿಕ ಏಡ್ಸ್ ಅಂದರೆ ಎಚ್‌ಐವಿ ಸೋಂಕಿನಿಂದ ಮಹಿಳೆಯರನ್ನು ರಕ್ಷಿಸಲು ಲಸಿಕೆಯನ್ನು ಆವಿಷ್ಕರಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ನೀಡುವ ಚುಚ್ಚುಮದ್ದು ಇದು. ಲಸಿಕೆ ಪ್ರಯೋಗ 100 ಪ್ರತಿಶತ ಯಶಸ್ವಿಯಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ತಜ್ಞರ ಪ್ರಕಾರ ಇನ್ನು ಇಂಜೆಕ್ಷನ್ ಮೂಲಕ ಎಚ್ ಐವಿ ಸೋಂಕನ್ನು ತಡೆಯಬಹುದು.
ವರ್ಷಕ್ಕೆ ಎರಡು ಬಾರಿ ಈ ಚುಚ್ಚುಮದ್ದನ್ನು ಪಡೆದರೆ ಮಹಿಳೆಯರು ಎಚ್‌ಐವಿ ಸೋಂಕಿನಿಂದ ಪಾರಾಗಬಹುದು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿ ಮಹಿಳೆಯರು, ಹದಿಹರೆಯದ ಹುಡುಗಿಯರ ಮೇಲೆ ವಿಜ್ಞಾನಿಗಳು ಈ ಚುಚ್ಚುಮದ್ದನ್ನು ಪರೀಕ್ಷಿಸಿದ್ದಾರೆ. ಅದು 100 ಪ್ರತಿಶತ ಯಶಸ್ವಿಯಾಗಿದೆ.
ಈ ಚುಚ್ಚುಮದ್ದನ್ನು ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಯೋಗಿಸಲಾಗಿದೆ. ಈ ಅಮೆರಿಕದ ಗಿಲಿಯಾಡ್ ಕಂಪನಿ ತಯಾರಿಸಿದೆ. Lenacapavir ಎಂದು ಇದರ ಹೆಸರು. ತನ್ನ ಮೂರನೇ ಪ್ರಯೋಗದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಈ ಎಚ್‌ಐವಿ ಔಷಧವನ್ನು ಬಳಸಲು ಅನುಮತಿ ಪಡೆಯುವ ಮೊದಲು ಪುರುಷರ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಔಷಧದ ಯಶಸ್ಸನ್ನು ಅಳೆಯಲು ನಡೆಸಿದ ಅಧ್ಯಯನದಲ್ಲಿ ಸುಮಾರು ಐದು ಸಾವಿರ ಎಚ್ಐವಿ ನೆಗೆಟಿವ್ ಇರುವ ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಈ ಔಷಧಿ ಪಡೆದ ನಂತರ ಒಬ್ಬ ಮಹಿಳೆಯೂ ಎಚ್‌ಐವಿಗೆ ಬಲಿಯಾಗಲಿಲ್ಲ.
26 ವಾರಗಳ ಕಾಲ ನಡೆದ ಈ ಸಂಶೋಧನೆಯಲ್ಲಿ ಲೆಂಕಾವಿರ್ ಲಸಿಕೆ ಪಡೆದ ಮಹಿಳೆಗೆ ಸೋಂಕು ತಗುಲದೇ ಇರುವುದು ದೃಢಪಟ್ಟಿದೆ. ಈ ಔಷಧ ಪಡೆಯದ ಮಹಿಳೆಯರಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಮುನ್ನ ನಡೆದ ಮತ್ತೊಂದು ಅಧ್ಯಯನದಲ್ಲಿ ಮಹಿಳೆಯರ ಗುಂಪಿಗೆ ಎಚ್ ಐವಿ ತಡೆ ಮಾತ್ರೆಗಳನ್ನು ನೀಡಲಾಗಿತ್ತು. ಆದರೆ ಈ ಮಾತ್ರೆಗಳನ್ನು ಸೇವಿಸಿದರೂ ಶೇ.2ರಷ್ಟು ಮಹಿಳೆಯರು ಎಚ್ ಐವಿಗೆ ಬಲಿಯಾಗಿದ್ದಾರೆ. ಶೀಘ್ರದಲ್ಲೇ ಈ ಲಸಿಕೆಗೆ ಅನುಮೋದನೆ ಕೂಡ ದೊರೆಯಲಿದೆ.
ಲೆಂಕಾವಿರ್ ಔಷಧದ ಬೆಲೆ ಕೂಡ ಕಡಿಮೆ ಇದೆ. ಹೊಸ ಔಷಧದ ಬೆಲೆಯನ್ನು ನಲವತ್ತು ಡಾಲರ್ ಅಂದರೆ ಸುಮಾರು 3350 ರೂಪಾಯಿಗೆ ನಿಗದಿಪಡಿಸಲಾಗುತ್ತಿದೆ. ಪ್ರಸ್ತುತ ಲೆಂಕಾವಿರ್‌ನ ಒಂದು ಡೋಸ್‌ಗೆ ಸುಮಾರು 35 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಹಾಗಾಗಿ ಇದನ್ನು ಜನಸಾಮಾನ್ಯರು ಪಡೆಯುವುದು ಅಸಾಧ್ಯ. ಈ ಔಷಧವನ್ನು ಪುರುಷರ ಮೇಲೂ ಪ್ರಯೋಗಿಸಲಾಗುತ್ತಿದ್ದು, ಈ ಫಲಿತಾಂಶವೂ ಯಶಸ್ವಿಯಾದರೆ ಇಡೀ ಜಗತ್ತು ಏಡ್ಸ್ ಮಹಾಮಾರಿಯಿಂದ ಪಾರಾಗಲಿದೆ.