ಒಂದಿಂಚು ಉಗುರು ಉದ್ದ ಇದ್ದರೆ ಸಾಕು, ಕೆಲವರು ಅದನ್ನೇ ಫ್ಯಾಶನ್ ಅಂತ ಅಂದುಕೊಳ್ತಾರೆ. ಇನ್ನೂ ಕೆಲವರಿಗೆ ಅದು ಕಿರಿಕಿರಿ ಆಗಿರುತ್ತೆ. ಉಗುರು ಕತ್ತರಿಸಿಕೊಳ್ಳುವ ತನಕ ಅವರಿಗೆ ಸಮಾಧಾನ ಇರುವುದಿಲ್ಲ. ಇನ್ನೂ ಕೆಲ ಮಹಾನುಭಾವರು ಇರ್ತಾರೆ ನೋಡಿ. ಅವರಿಗೆ ಮಾರುದ್ದದ ಉಗುರು ಬೆಳೆಸಿಕೊಳ್ಳೊ ಕ್ರೇಜ್ ಇರುತ್ತೆ. ಹಾಗೆ ಕ್ರೇಜ್ ಬೆಳೆಸಿಕೊಂಡವರು ಈ ಇಂಡಿಯಾನಾದ ಗ್ಯಾರಿ ಮೂಲದ ಕಾರ್ಡೆಲಿಯಾ ಆಡಮ್ಸ್, ಇವರು 33 ವರ್ಷಗಳಿಂದ 12 ಇಂಚು ಉದ್ದದ ಕೈಬೆರಳಿನ ಉಗುರನ್ನ ಬೆಳೆಸಿಕೊಂಡಿದ್ದಾರೆ.
ಕಾರ್ಡೆಲಿಯಾ ಆಡಮ್ಸ್, 1989ರಲ್ಲಿ ತನ್ನ ಉಗುರನ್ನ ಬೆಳೆಸಲು ನಿರ್ಧರಿಸಿದಳು. ಏಕೆಂದ್ರೆ ಈಕೆಗೆ ತನ್ನ ತಾಯಿಯ ಉದ್ದನೆಯ ಉಗುರುಗಳು ತುಂಬಾನೇ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಕಾರ್ಡೆಲಿಯಾ 16 ಇಂಚುಗಳಷ್ಟು ಉದ್ದ ಉಗುರುಗಳನ್ನ ಬೆಳೆಸಿದ್ದಾರೆ. ಇವರ ಟಾರ್ಗೆಟ್ 12 ಇಂಚುಗಳಷ್ಟು ಮಾತ್ರ ಇದ್ದು, ಇದನ್ನ ಆಗಾಗ ಕತ್ತರಿಸಿಕೊಳ್ತಾ ಇರ್ತಾರೆ.
“ಉಗುರುಗಳು ನನ್ನ ತೋಳಿನ ಮೇಲೆ ಹಿಂದಕ್ಕೆ ಮಡಚಿಕೊಳ್ಳುತ್ತೆ. ಹಾಗಾಗಿ ನಾನು ಅದನ್ನ ಸರಿಯಾದ ರೀತಿಯಲ್ಲಿ ಶೇಪ್ ಕೊಡದಿದ್ದರೆ ಅವು ಹೇಗ್ಹೇಗೋ ಬೆಳೆದು ಬಿಡ್ತಿವೆ. ನನ್ನ ದಿನನಿತ್ಯದ ಕೆಲಸ ಮಾಡುವಾಗ, ಅಡುಗೆ ಮಾಡುವಾಗ ಈ ಉಗುರುಗಳು ಕೆಲವೊಮ್ಮೆ ಸಮಸ್ಯೆ ಅಂತ ಅನಿಸಿಬಿಡುತ್ತೆ.”` ಅಂತ ಕಾರ್ಡೆಲಿಯಾ ಹೇಳುತ್ತಾರೆ.
ಅಷ್ಟೆ ಅಲ್ಲ, “ಈ ಉದ್ದನೆಯ ಉಗುರುಗಳು ನನಗೆ ಫೇಮಸ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನ ಫಾಲೋ ಮಾಡುವಂತೆ ಮಾಡಿದ್ದು ಇದೇ ಉಗುರುಗಳು. ನಾನು ಮಾಡಿರೋ ಅನೇಕ ವಿಡಿಯೋಗಳು ವೈರಲ್ ಆಗುವಂತೆ ಮಾಡಿವೆ. ಕೆಲವು ವಿಡಿಯೋಗಳಂತೂ 17 ಮಿಲಿಯನ್ ವೀಕ್ಷಣೆಗಳನ್ನ ಹೊಂದಿವೆ.’’ ಅಂತ ಖುಷಿಯಿಂದ ಕಾರ್ಡೆಲಿಯಾ ಹೇಳಿಕೊಳ್ತಾರೆ.
ಪ್ರತಿಯೊಬ್ಬರೂ ಈ ರೀತಿ ಉಗುರುಗಳನ್ನ ಬೆಳೆಸುವುದು ಅಸಾಧ್ಯ. 33 ವರ್ಷಗಳಿಂದ ಬೆಳೆಸಿದ ನಂತರವೇ 12 ಇಂಚು ಉದ್ದದ ಉಗುರು ಬೆಳೆದಿರೊದು. ಇಷ್ಟು ಉದ್ದದ ಉಗುರು ಇಟ್ಟುಕೊಂಡು ಕೆಲಸ ಮಾಡುವುದು ಕೂಡ ಸಾಹಸದ ಕೆಲಸ.