ಕೊರೊನಾ ಲಸಿಕೆಯನ್ನು ಜನತೆ ಸ್ವೀಕರಿಸುವಂತೆ ಮಾಡಲು ವಿವಿಧ ದೇಶಗಳಲ್ಲಿ ಜನತೆಗೆ ಇನ್ನಿಲ್ಲದ ಆಮಿಷವನ್ನು ಒಡ್ಡಲಾಗುತ್ತಿದೆ. ಸಾರ್ವಜನಿಕರು ಕೋವಿಡ್ ಲಸಿಕೆಯನ್ನು ಸ್ವೀಕರಿಸಲಿ ಎಂಬ ಕಾರಣಕ್ಕೆ ನಾನಾ ಮಹತ್ವದ ಕ್ರಮಗಳನ್ನು ಕೈಗೊಂಡ ದೇಶಗಳ ಪೈಕಿ ಆಸ್ಟ್ರೇಲಿಯಾ ಕೂಡ ಒಂದು.
ಸಾಕಷ್ಟು ಮಂದಿ ಈಗಲೂ ಸಹ ಕೋವಿಡ್ ಲಸಿಕೆಯನ್ನು ಸ್ವೀಕರಿಸಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಜನತೆಯ ವಯಸ್ಸಿನ ಅನುಗುಣವಾಗಿ ಅವರಿಗೆ ಹಣ, ಆಟಿಕೆ ಸಾಮಗ್ರಿ, ಬಿಯರ್, ಆಹಾರ ಪದಾರ್ಥ ಹೀಗೆ ಸಾಕಷ್ಟು ಬಹುಮಾನಗಳನ್ನೂ ಇಡಲಾಗ್ತಿದೆ.
ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಯುವತಿಯೊಬ್ಬರು ಕೊರೊನಾ ಲಸಿಕೆ ಸ್ವೀಕರಿಸಿದ್ದು ಈ ಮೂಲಕ ಅವರ ಹಣೆಬರಹವನ್ನೇ ಬದಲಾಯಿಸಿಕೊಂಡಿದ್ದಾರೆ.
ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿಯ ವಿಜೇತಳಾದ ಯುವತಿಯು 1 ಮಿಲಿಯನ್ ಹಣವನ್ನು ಬಹುಮಾನದ ರೂಪದಲ್ಲಿ ಪಡೆದು ಕೋಟ್ಯಾಧಿಪತಿ ಎನಿಸಿದ್ದಾರೆ. ಕೊರೊನಾ ಲಸಿಕೆಯನ್ನು ಸ್ವೀಕರಿಸಿದ ಲಕ್ಕಿ ವಿಜೇತರಿಗೆ 1 ಮಿಲಿಯನ್ ಬಹುಮಾನ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ಲಕ್ಷಾಂತರ ಮಂದಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದರು. ಇದರಲ್ಲಿ ಲಕ್ಕಿ ವಿನ್ನರ್ ಆಗಿ ಹೊರಹೊಮ್ಮಿದ ಈ ಯುವತಿ 1 ಮಿಲಿಯನ್ ಡಾಲರ್ ಮೊತ್ತವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿ ಅಭಿಯಾನವು ದೇಶದಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಣದ ಆಸೆಗಾಗಿ ಸರಿಸುಮಾರು 3 ಮಿಲಿಯನ್ ಮಂದಿ ಲಸಿಕೆ ಸ್ವೀಕರಿಸಿದ್ದರು. ಆದರೆ ಕೊನೆಯಲ್ಲಿ 25 ವರ್ಷದ ಜೋನ್ನೆ ಈ ಹಣವನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ.
ತಾನು ಈ ಲಾಟರಿ ಗೆಲ್ಲಬಹುದು ಎಂದು ಜೊನ್ನೆ ಕನಸಿನಲ್ಲಿಯೂ ಊಹಿಸಿರಲಿಲ್ಲವಂತೆ. ಲಾಟರಿ ಆಡಳಿತ ಮಂಡಳಿ ಜೊನ್ನೆಗೆ ಮೊದಲು ಕರೆ ಮಾಡಿದಾಗ ಕೆಲಸದಲ್ಲಿ ನಿರತಳಾಗಿದ್ದ ಜೊನ್ನೆ ಕರೆಯನ್ನು ಸ್ವೀಕರಿಸಿರಲಿಲ್ಲವಂತೆ.
ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದೊಡ್ಡ ಮೊತ್ತದ ಚೆಕ್ ಸ್ವೀಕರಿಸಿರುವ ಜೊನ್ನೆ ಈ ಹಣವನ್ನು ಭವಿಷ್ಯಕ್ಕಾಗಿ ಎತ್ತಿಡುವುದಾಗಿ ಹೇಳಿದ್ದಾರೆ.
ನಾನು ನನ್ನ ಕುಟುಂಬಸ್ಥರನ್ನು ಚೀನಾಗೆ ಕರೆದುಕೊಂಡು ಹೋಗಲು ಬಯಸಿದ್ದೇನೆ. ಗಡಿ ತೆರೆದ ಬಳಿಕ ನಾವು ಚೀನಾ ಹೊಸ ವರ್ಷಕ್ಕೆ ಅಲ್ಲಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಎಂಜಾಯ್ ಮಾಡಲಿದ್ದೇವೆ. ನಾನು ನನ್ನ ಪೋಷಕರಿಗೆ ಉಡುಗೊರೆಗಳನ್ನು ಕೊಂಡುಕೊಳ್ಳುತ್ತೇನೆ. ಹಾಗೂ ಉಳಿದ ಹಣವನ್ನು ಭವಿಷ್ಯಕ್ಕೆ ಕೂಡಿಡುತ್ತೇನೆ ಎಂದು ಜೊನ್ನೆ ಹೇಳಿದ್ದಾರೆ.