ಪಂಜಾಬ್ ಸರ್ಕಾರ ಗುರಿಯಾಗಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆಯ ಫೋಟೋ ಹಿಂದಿನ ಕಥೆಯನ್ನು ಅಲ್ಲಿನ ಪೊಲೀಸರು ಬೇಧಿಸಿದ್ದಾರೆ.
ಬರ್ನಾಲಾ ಜಿಲ್ಲೆಯ ಧನೌಲಾದಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ಮಲಗಿರುವ ಚಿತ್ರವನ್ನು ಸಿಧು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಾನ್ ಸಾಬ್, ಧನೌಲಾದ ಹೆದ್ದಾರಿಯಲ್ಲಿ ಕೈ ಕಾಲುಗಳನ್ನು ಕಟ್ಟಿಹಾಕಿದ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ ಮತ್ತು ಖೇಮ್ಕರನ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದಿದ್ದಾರೆ. ಸಮಾಜಲ್ಲಿ ಕಾನೂನಿನ ಭಯವಿಲ್ಲ. ಇಂತಹ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮುಂದುವರಿದರೆ ಯಾರೂ ಇಲ್ಲಿ ಉಳಿಯುವುದಿಲ್ಲ ಎಂದು ಸಿಧು ವಾಗ್ದಾಳಿ ನಡೆಸಿದ್ದರು.
ವಿದೇಶಿಯರನ್ನು ಆಹ್ವಾನಿಸುವ ಮೊದಲು ಮೊದಲು 3 ಕೋಟಿ ಪಂಜಾಬಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗುರಿಯಾಗಿಸಿ ಹೇಳಿದ್ದರು.
ಶನಿವಾರ ಬರ್ನಾಲಾ ಪೊಲೀಸ್ ಅಧಿಕಾರಿ ದರ್ಪಣ್ ಅಹ್ಲುವಾಲಿಯಾ ಸಿಧು ಪ್ರಸ್ತಾಪಿಸಿದ ಮಹಿಳೆ ಕುರಿತು ತನಿಖೆ ನಡೆಸಿ ವರದಿ ಮಾಡಿದ್ದಾರೆ.
33 ವರ್ಷದ ಮಹಿಳೆಯು ಪುಸ್ತಕ ಮತ್ತು ಗೃಹೋಪಯೋಗಿ ವಸ್ತು ಖರೀದಿಸಲು ಬಸ್‌ನಲ್ಲಿ ಮಾನ್ಸಾದ ಬುಧ್ಲಾಡಾದಿಂದ ಬರ್ನಾಲಾದ ಧನುಲಾಗೆ ಬಂದಿದ್ದರು. ರಾತ್ರಿ ಕಳೆಯಲು ಸ್ಥಳ ಸಿಗದ ಹಿನ್ನೆಲೆಯಲ್ಲಿ ಆಕೆ ತನ್ನ ದುಪಟ್ಟಾದಿಂದ ಮುಚ್ಚಿಕೊಂಡು ರಸ್ತೆಬದಿಯಲ್ಲಿ ಮಲಗಿದ್ದರೆಂದು ಪೊಲೀಸರು ವರದಿ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಸ್ಥಳೀಯರು ಆಕೆಯನ್ನು ಧನೌಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಜೊತೆಗೆ ಪೊಲೀಸರು ಮಹಿಳೆಯ ತಾಯಿ ಮತ್ತು ಸಹೋದರನನ್ನು ಆರೋಗ್ಯ ಕೇಂದ್ರಕ್ಕೆ ಕರೆಸಿದ್ದರು. ತನ್ನ ಮಗಳು ಖಿನ್ನತೆ ಒಳಗಾಗಿದ್ದಾಳೆ ಎಂದು ಆಕೆಯ ತಾಯಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ.
ಆಕೆಯ ಕಾಲುಗಳನ್ನು ಕಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಆಕೆಯ ತಾಯಿ ಒತ್ತಾಯಿಸಿದ್ದಾರೆ.