ಕೆಲವು ಚಾಲಾಕಿ ಮಕ್ಕಳು ಹಣಕ್ಕಾಗಿ ಪೋಷಕರನ್ನೇ ಯಾಮಾರಿಸುವುದುಂಟು. ಇಲ್ಲೊಂದು ಪ್ರಕರಣದಲ್ಲಿ ತಾನು ಅಪಹರಣವಾಗಿದ್ದೇನೆಂದು ಪೋಷಕರನ್ನೇ ಯಾಮಾರಿಸಿದವಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಪೇನ್ನಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಸುಲಿಗೆ ಮಾಡಲು ಫೇಕ್ ಅಪಹರಣದ ಕತೆ ಕಟ್ಟಿದ ಆರೋಪದ ಮೇಲೆ ಬಂಧಿಸಲಾಗಿದೆ.
ಸ್ಪ್ಯಾನಿಷ್ ದ್ವೀಪದ ಟೆನೆರಿಫ್ನಲ್ಲಿ ಈ ಘಟನೆ ನಡೆದಿದ್ದು, ಈ ವಾರದ ಆರಂಭದಲ್ಲಿ ಮಹಿಳೆ ತನ್ನ ತಾಯಿಗೆ ವೀಡಿಯೊವನ್ನು ಕಳುಹಿಸಿದ್ದು, ಅದರಲ್ಲಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿದ್ದು ರಕ್ತಸ್ರಾವವಾದಂತೆ ಮತ್ತು ಕುತ್ತಿಗೆಯಲ್ಲಿ ಆಗಂತುಕ ಚಾಕು ಹಿಡಿದಂತಿತ್ತು.
ಈ ವೇಳೆ ತನ್ನ ಬಿಡುಗಡೆಗಾಗಿ 50,000 ಯುರೋಗಳನ್ನು (ಸುಮಾರು 40 ಲಕ್ಷ ರೂಪಾಯಿಗಳು) ಬೇಡಿಕೆ ಇಟ್ಟಿದ್ದು, ಇದು ಅಪಹರಣಕಾರನ ಬೇಡಿಕೆ ಎಂದು ಕರೆದಿದ್ದಾಳೆ.
ಈ ವಿಡಿಯೋ ವೆೈರಲ್ ಆಗಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಮಮ್ಮಿ. ನನ್ನನ್ನು ಅಪಹರಿಸಿದ್ದಾರೆ. ನೀವು ಪೊಲೀಸರಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ನೀವು ಪೊಲಿಸರಿಗೆ ಹೇಳಿದರೆ ನನ್ನನ್ನು ಕೊಲ್ಲುತ್ತಾರೆ, ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇವರು ನನ್ನನ್ನು ಬಂಧಿಸಿಟ್ಟು ಹೊಡೆದಿದ್ದಾರೆ ಊಟ ಕೊಟ್ಟಿಲ್ಲ ಎಂದು ಆಕೆ ವಿಡಿಯೋದಲ್ಲಿ ದೂರಿದ್ದಳು.
ವಿಷಯದ ಬಗ್ಗೆ ತನಿಖೆ ನಡೆಸಿದ ನಂತರ, ಸಿವಿಲ್ ಗಾರ್ಡ್ ಮಹಿಳೆ ನೆರವಿಗೆ ಬಂದಿದೆ. ಜೀವ ಬೆದರಿಕೆಗೆ ಪ್ರತಿಯಾಗಿ 45,000 ಯುರೋಗಳಷ್ಟು (ಸುಮಾರು 36 ಲಕ್ಷ ರೂಪಾಯಿ) ಮೊತ್ತವನ್ನು ಮೂರು ಕಂತಿನಲ್ಲಿ ಪಾವತಿ ಮಾಡಿದ್ದೇನೆ ಎಂದು ತಾಯಿ ಪೊಲೀಸರಿಗೆ ಬಹಿರಂಗಪಡಿಸಿದ್ದರು.
ಹೆಚ್ಚಿನ ತನಿಖೆಯಲ್ಲಿ, 24 ಗಂಟೆಗಳ ಒಳಗೆ ಮಹಿಳೆಯು ಹಾನಿಗೊಳಗಾಗದೆ ಬಿಡಲ್ಪಟ್ಟಳು ಎಂಬುದು ಕಂಡುಬಂದಿದೆ. ನಕಲಿ ಅಪಹರಣ ಪ್ರಕರಣದಲ್ಲಿ ಹಣ ಕಳೆದುಕೊಂಡವಳ ಮಗಳು ಮತ್ತು ಆಕೆಯ ಸ್ನೇಹಿತ, ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದರ ಹಿಂದೆ ಇದ್ದ 5 ಜನರನ್ನು ಕ್ಯಾಸಿನೋದಲ್ಲಿದ್ದಾಗ ಬಂಧಿಸಿ, ಸುಲಿಗೆ ಆರೋಪ ಹೊರಿಸಲಾಗಿದೆ. ವೀಡಿಯೊದಲ್ಲಿ ಬಳಸಿದ ನಕಲಿ ರಕ್ತ ಮತ್ತು ಚಾಕುವನ್ನು ಸಹ ತನಿಖಾ ತಂಡ ಕಂಡುಹಿಡಿದಿದೆ ಎಂದು ವರದಿಯಾಗಿದೆ.