ಬರೇಲಿ: ತನ್ನ ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ, ಯುವಕ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.
ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಯುವಕ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿದ್ದಾಳೆ. ಬರೇಲಿಯ ದೆಹಲಿ ರಸ್ತೆಯ ಹೋಟೆಲ್ ನಲ್ಲಿ ಘಟನೆ ನಡೆದಿದೆ. ಯುವತಿ ಅವಾಂತರ ಮಾಡಿದ್ದರಿಂದ ನಿಶ್ಚಿತಾರ್ಥ ನಿಲ್ಲಿಸಲಾಗಿದ್ದು, ಮರುದಿನ ನಡೆಯಬೇಕಿದ್ದ ಮದುವೆಯನ್ನು ಕೂಡ ರದ್ದು ಮಾಡಲಾಗಿದೆ.
ಮೀರತ್ ನಿವಾಸಿಗಳಾಗಿರುವ ಯುವಕ-ಯುವತಿ ಮೊದಲೇ ಪ್ರೀತಿಸಿದ್ದು ಆಕೆಯಿಂದ ದೂರವಾಗಿದ್ದ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ನಿಶ್ಚಿತಾರ್ಥ ನಡೆಯುತ್ತಿದ್ದ ಸ್ಥಳಕ್ಕೆ ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ ಅತ್ಯಾಚಾರ ಆರೋಪ ಮಾಡಿ ನಿಶ್ಚಿತಾರ್ಥವನ್ನು ನಿಲ್ಲಿಸಿದ್ದಾಳೆ. ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಯುವತಿ ಹಾಗೂ ಯುವಕನಿಂದ ಹೇಳಿಕೆ ಪಡೆದು ಕೇಸ್ ದಾಖಲಿಸಿಕೊಂಡು ಪ್ರಕರಣವನ್ನು ಮೀರತ್ ಗೆ ವರ್ಗಾವಣೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಯುವಕನ ತಂದೆ, ಯುವತಿ ಯಾರು ಎನ್ನುವುದು ನಮ್ಮ ಕುಟುಂಬಕ್ಕೆ ತಿಳಿದಿಲ್ಲ. ನನ್ನ ಮಗನನ್ನು ಇಷ್ಟಪಡುತ್ತಿದ್ದಾಳೆ. ಬಲವಂತವಾಗಿ ಮದುವೆಯಾಗಲು ಮುಂದಾಗಿದ್ದಾಳೆ. ಬೌನ್ಸರ್ ಜೊತೆಗೆ ಆಗಮಿಸಿ ನಡೆಯಬೇಕಿದ್ದ ಸಮಾರಂಭವನ್ನು ರದ್ದುಮಾಡಲು ಕಾರಣವಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.