ಲೇಖಕಿ ಮತ್ತು ವಿದೇಶಿ ವರದಿಗಾರ್ತಿಯಾಗಿರುವ ಪಲ್ಲವಿ ಅಯ್ಯರ್ ಅವರು ತಮ್ಮ ಮೊದಲ ವಾರದ ಕೀಮೋ ಬಗ್ಗೆ ಟ್ವಿಟರ್ನಲ್ಲಿ ಮಾತನಾಡಿದ್ದು, ಅದೀಗ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣ ಅವರು ಹಾಜ್ಮೋಲಾದ ಬಗ್ಗೆ ಮಾತನಾಡಿದ್ದಾರೆ!
ವಾಕರಿಕೆ ವಿರುದ್ಧ ಹೋರಾಡಲು ಹಾಜ್ಮೋಲಾ ಹೇಗೆ ಸಹಾಯ ಮಾಡಿತು ಎಂದು ಅವರು ಬರೆದುಕೊಂಡಿದ್ದಾರೆ. ಹಾಜ್ಮೋಲಾ ಜೀರ್ಣಕ್ರಿಯೆಗೆ ಸಹಾಯ ಮಾಡುವ ಉದ್ದೇಶದಿಂದ ತಯಾರಿಸಿದ ಮಾತ್ರೆಯಾಗಿದೆ. ಸಾಂಪ್ರದಾಯಿಕ ಭಾರತೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಖಾದ್ಯ ಲವಣಗಳ ಕಟುವಾದ ಮಿಶ್ರಣದಿಂದ ತಯಾರಿಸಿರುವ ಈ ಗಿಡಮೂಲಿಕೆಯ ಮಾತ್ರೆ ಜೀರ್ಣಕಾರಿ ಅಂಶವನ್ನು ಹೊಂದಿರುವುದರಿಂದ ಇದು ತಮಗೆ ಸಹಕಾರಿಯಾಯಿತು ಎಂದು ಅವರು ಹೇಳಿದ್ದಾರೆ.
ಹಾಜ್ಮೋಲಾ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪಲ್ಲವಿ, “ಒಂದು ವಾರದ ಕೀಮೋ ಥೆರಪಿ ಸಮಯದಲ್ಲಿ ಸ್ನೇಹಿತರೊಬ್ಬರು ನನಗೆ ಹಾಜ್ಮೋಲಾ ತಂದುಕೊಟ್ಟರು. ಕಿಮೋ ಥೆರಪಿಯಿಂದಾಗಿ ನನಗೆ ವಾಕರಿಕೆ ಶುರುವಾಗಿತ್ತು. ಹಾಜ್ಮೋಲಾ ತಿನ್ನುತ್ತಿದ್ದಂತೆಯೇ ಕ್ರಮೇಣ ವಾಕರಿಕೆ ದೂರವಾಯಿತು“ ಎಂದು ಅವರು ಬರೆದುಕೊಂಡಿದ್ದು, ಇದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತೀಯ ಆಯುರ್ವೇದದ ಕುರಿತು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.