ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಿ, ಕಸದ ಉತ್ಪತ್ತಿ ಕಡಿಮೆಯಾಗಲಿ. ನಿರುಪಯುಕ್ತ ವಸ್ತುಗಳನ್ನ ಬಳಸಿ ನಮಗೆ ಬೇಕಾದ ವಸ್ತುಗಳನ್ನ ತಯಾರು ಮಾಡಿ ಎಂಬ ಮಾತುಗಳು ಇತ್ತೀಚಿಗೆ ಕೇಳಿಬರುತ್ತಿವೆ. ಬಳಕೆ ಮಾಡಿದ ವಸ್ತುಗಳನ್ನು ಬಿಸಾಡದೇ ಅದರಿಂದ ಮತ್ತೊಂದು ಹೊಸ ವಸ್ತು ಮಾಡುವ ಪ್ರವೃತ್ತಿಗಳು ಹೆಚ್ಚಾಗ್ತಿವೆ.
ಇದನ್ನು ನೀವೇ ಮಾಡಿ (Do It Yourself) ಫ್ಯಾಶನ್ ಪ್ರವೃತ್ತಿ ಈಗ ಪ್ರಚಲಿತದಲ್ಲಿದೆ. DIY ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಒಂದು ಮೋಜಿನ ಮಾರ್ಗವಾಗಿದೆ. ಅಂತಹ ಮೋಜಿನ ಕಾರ್ಯವೊಂದರಲ್ಲಿ ಶ್ವೇತಾ ಮಹಾದಿಕ್ ಎಂಬ ಯುವತಿ ಪಾರ್ಲೆಜಿ ಬಿಸ್ಕತ್ ಪ್ಯಾಕ್ ಅನ್ನು ಮರುಬಳಕೆ ಮಾಡಿ ಅದರಿಂದ ವ್ಯಾನಿಟಿ ಬ್ಯಾಗ್ ಮತ್ತು ಪರ್ಸ್ ತಯಾರಿಸಿದ್ದಾರೆ.
ಬಿಸ್ಕತ್ ಪ್ಯಾಕ್ ಹೊದಿಕೆ (ರ್ಯಾಪರ್) ನಿಂದ ಪರ್ಸ್, ಬ್ಯಾಗ್ ತಯಾರಿಸುವ ಸಂಪೂರ್ಣ ವಿಡಿಯೋವನ್ನ ಅವರು ತಮ್ಮ ಇನ್ಷ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬ್ಯಾಲೆನ್ಸಿಯಾಗಾದ ಲೇಸ್ ಬ್ಯಾಗ್ ಸ್ಫೂರ್ತಿ ಎಂದು ತಿಳಿಸಿದ್ದಾರೆ. ಖಾಲಿ ಬಿಸ್ಕೆಟ್ ಪ್ಯಾಕ್ ಅನ್ನ ಪಾರದರ್ಶಕ ಕವರ್ ಮೇಲಿಟ್ಟು ಅದನ್ನು ಹೊಲೆದು ಜಿಪ್ ಸೇರಿಸಿ ಅತ್ಯಾಕರ್ಷಕ ಬ್ಯಾಗ್ ಮತ್ತು ಪರ್ಸ್ ತಯಾರಿಸಿದ್ದಾರೆ.
ವಿಡಿಯೋವನ್ನ “ಬಿಸ್ಕೆಟ್ ತಿಂದು ಚಮತ್ಕಾರಿ ಫ್ಯಾಷನ್ ಸೃಷ್ಟಿಸಿ,” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. 2.2 ಮಿಲಿಯನ್ ವೀಕ್ಷಣೆಯೊಂದಿಗೆ ವೀಡಿಯೊ ವೈರಲ್ ಆಗಿದೆ. ಕೆಲವರು ಇನ್ಮುಂದೆ ಪಾರ್ಲೆಜಿ ಬಿಸ್ಕೆಟ್ ಪ್ಯಾಕ್ ಮೇಲೆ ಆ ಪುಟ್ಟ ಹುಡುಗಿಯ ಫೋಟೋ ಬದಲು ನಿಮ್ಮ ಫೋಟೋ ಹಾಕುತ್ತಾರೆಂದು ತಮಾಷೆ ಮಾಡುತ್ತಾ ಯುವತಿಯ ಸೃಜನಶೀಲತೆಯನ್ನ ಕೊಂಡಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹಾದಿಕ್ ಇಂತಹ ಟ್ರೆಂಡಿ DIY ರಚನೆಗಳ ವೀಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.