ಮಹಿಳಾ ಪ್ರವಾಸಿಯೊಬ್ಬರು ಮೆಕ್ಸಿಕೋದ ಮಾಯನ್ ಪಿರಮಿಡ್ ಮೇಲೆ ಹತ್ತಿ ಡ್ಯಾನ್ಸ್ ಮಾಡಿದ್ದು, ಇದರಿಂದ ಕೋಪಗೊಂಡ ಸ್ಥಳೀಯರು ಗುಂಪಾಗಿ ಆಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಕ್ಸಿಕೋದ ಎಲ್ ಕ್ಯಾಸ್ಟಿಲ್ಲೋ ಎಂಬ ಸ್ಟೆಪ್ ಪಿರಮಿಡ್ ಏರುವ ಮೂಲಕ ಮಾಯನ್ ಸಂಸ್ಕೃತಿಗೆ ಅಗೌರವ ತೋರಿದಳೆಂದು ಆಕೆಯ ಮೇಲೆ ದಾಳಿ ನಡೆಸಲಾಯಿತು ಹಾಗೂ ನೀರಿನ ಬಾಟಲಿಗಳನ್ನು ಎಸೆಯಲಾಯಿತು. ಪಿರಮಿಡ್ ಯುಕಾಟಾನ್‌ನಲ್ಲಿರುವ ಚಿಚೆನ್ ಇಟ್ಜಾದ ಮಧ್ಯಭಾಗದಲ್ಲಿದೆ. ಘಟನೆಯ ಹಲವಾರು ವೀಡಿಯೊಗಳು ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿದ್ದು ವೈರಲ್ ಆಗುತ್ತಿವೆ.
ಮಹಿಳಾ ಪ್ರವಾಸಿ ಕುಕುಲ್ಕನ್ ದೇವಾಲಯ ಎಂದು ಕರೆಯಲ್ಪಡುವ ಐತಿಹಾಸಿಕ ಸ್ಮಾರಕದ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆ ಪಿರಮಿಡ್‌ನ ತುದಿಯನ್ನು ತಲುಪಿದ ನಂತರ, ತನ್ನ ಟೋಪಿಯನ್ನು ತೆಗೆದು ಖುಷಿಯಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದಳು. ಸ್ಮಾರಕದ ಬುಡದಲ್ಲಿ ನಿಂತಿದ್ದ ಪ್ರೇಕ್ಷಕರ ಗುಂಪನ್ನು ಇದನ್ನು ಕಂಡು ಆಕೆಯನ್ಮು ದೂಷಿಸಲು ಆರಂಭಿಸಿದೆ.
ಅವಳು ಪಿರಮಿಡ್‌ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ, ಆಕೆ ವಿರುದ್ಧ ಉಳಿದ ಪ್ರವಾಸಿಗರು ಕಿರುಚುವುದನ್ನು ಮತ್ತು ಗೇಲಿ ಮಾಡುವುದನ್ನು ಮುಂದುವರೆಸಿದ್ದರು. ಕೆಲವರು ನೀರಿನ ಬಾಟಲಿಗಳನ್ನು ಅವಳ ಮೇಲೆ ಎಸೆದರು.
ಸ್ಪ್ಯಾನಿಷ್ ಭಾಷೆಯಲ್ಲಿ “ಅವಳನ್ನು ಲಾಕ್ ಮಾಡಿ” ಮತ್ತು “ಜೈಲು, ಜೈಲು” ಎಂದು ಕೂಗುವುದು ಸಹ ವಿಡಿಯೋದಲ್ಲಿ ಕೇಳಬಹುದು.
ವರದಿಗಳ ಪ್ರಕಾರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಂಥ್ರೊಪಾಲಜಿ ಅಂಡ್ ಹಿಸ್ಟರಿ ಚಿಚೆನ್ ಇಟ್ಜಾದ ಕೋಣೆಗಳಿಗೆ ಸಂದರ್ಶಕರನ್ನು ಹತ್ತುವುದನ್ನು ನಿಷೇಧಿಸುತ್ತದೆ. ಪುರಾತತ್ತ್ವ ಶಾಸ್ತ್ರದ ಸ್ಥಳದ ಅಧಿಕೃತ ವೆಬ್‌ಸೈಟ್ ಪ್ರಕಾರ, 2006ರಲ್ಲಿ 80 ವರ್ಷ ವಯಸ್ಸಿನ ಅಮೇರಿಕನ್ ಮಹಿಳೆ ಎಲ್ ಕ್ಯಾಸ್ಟಿಲ್ಲೋನ 91 ಮೆಟ್ಟಿಲುಗಳನ್ನು ಹತ್ತಿದ ನಂತರ ಮರಣದ ಹೊಂದಿದ್ದರು. ಬಳಿಕ ನಿಷೇಧವನ್ನು ಹೇರಲಾಯಿತು.