ಸ್ಕಾಟಿಷ್ ಮಹಿಳೆಯೊಬ್ಬಳು ತನ್ನ ಪೃಷ್ಠದ ಮೇಲೆ 20 ಸೆಂಟಿಮೀಟರ್ ಆಳವಾದ ಗಾಯವನ್ನು ಉಂಟುಮಾಡಿದ ಅಪರೂಪದ ಮಾಂಸ ತಿನ್ನುವ ಕಾಯಿಲೆಯಿಂದ ನರಳಾಡಿ ಬದುಕುಳಿದಿದ್ದಾರೆ. ವಿಚಿತ್ರ ಕಾಯಿಲೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಅವರು ತಾನು ಜೀವಂತವಾಗಿರೋದು ತನ್ನ ಅದೃಷ್ಟ ಎಂದು ಬಣ್ಣಿಸಿದ್ದಾರೆ.
ಟ್ರೇಸಿ ಡಿ ಜೊಂಗ್ ಎಗ್ಲಿನ್ ಎಂಬ ಮಹಿಳೆಯ ಜೀವನದಲ್ಲಿ ಈ ಭಯಾನಕ ಅಗ್ನಿಪರೀಕ್ಷೆಯು ಜ್ವರ ತರಹದ ರೋಗಲಕ್ಷಣಗಳೊಂದಿಗೆ ಪ್ರಾರಂಭವಾಯಿತು. ತಕ್ಷಣ ವೈದ್ಯಕೀಯ ಸೇವೆ ಪಡೆದರೂ ನಂತರ ಆಕೆ ಮಾರಣಾಂತಿಕ ಸ್ಥಿತಿಯನ್ನ ತಲುಪಿದರು. ಈಗ ನೆದರ್ಲ್ಯಾಂಡ್ ನಲ್ಲಿ ವಾಸಿಸುತ್ತಿರುವ ಎಗ್ಲಿನ್ ಸೆಪ್ಟಿಕ್, ಬಹು ಶಸ್ತ್ರಚಿಕಿತ್ಸೆಗಳು ಮತ್ತು ಕೋಮಾ ತಲುಪಿ ಸಾವು ಗೆದ್ದು ಬಂದಿದ್ದಾರೆ.
ಇಬ್ಬರು ಮಕ್ಕಳ ತಾಯಿಯಾಗಿರುವ ಮಾಜಿ ಇವೆಂಟ್ ಮ್ಯಾನೇಜರ್, 59 ವರ್ಷದ ಎಗ್ಲಿನ್ ಜನವರಿ 20 ರಂದು ಮೊದಲ ರೋಗಲಕ್ಷಣಗಳನ್ನು ಹೊಂದಿದರು. ಐದು ದಿನಗಳ ನಂತರ ಸೆಪ್ಟಿಕ್ ನಿಂದ ಆಸ್ಪತ್ರೆ ಸೇರಿದರು. ಈ ವೇಳೆ ವೈದ್ಯರು ಆಕೆಯ ಎಡ ಪೃಷ್ಠದ ಮೇಲಿದ್ದ ಕಪ್ಪು ಹುಣ್ಣನ್ನು ಅಪರೂಪದ ಮತ್ತು ಮಾರಣಾಂತಿಕವಾದ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎಂದು ಕರೆದರು. ಇದು ಬ್ಯಾಕ್ಟೀರಿಯಾದ ಸೋಂಕು.
ಸೋಂಕಿತ ಅಂಗಾಂಶ ಮತ್ತು ಸ್ನಾಯುಗಳನ್ನು ತೆಗೆದುಹಾಕಲು ಮೂರು ಶಸ್ತ್ರಚಿಕಿತ್ಸೆಗಳನ್ನು ಸಹಿಸಿಕೊಂಡ ಎಗ್ಲಿನ್ ಒಂಬತ್ತು ದಿನಗಳ ಕಾಲ ಕೋಮಾದಲ್ಲಿದ್ದರು. ಆಕೆ ಬದುಕುಳಿಯುವ ಸಾಧ್ಯತೆ ಕೇವಲ 10% ಇತ್ತು. ಆದರೂ ಕೋಮಾದಿಂದ ಹೊರಬಂದ ಅವರು ಅಷ್ಟೊತ್ತಿಗೆ 70-ಪೌಂಡ್ ತೂಕ ಕಳೆದುಕೊಂಡಿದ್ದರು. ಮತ್ತೆ ನಡೆಯಲು ಕಲಿಯುವುದು ಸೇರಿದಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ತುಂಬಾ ಕಷ್ಟವಾಗಿತ್ತು.
ಆದರೆ ಸೋಂಕಿನ ಕಾರಣವು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ವೈದ್ಯರು ಸೂಚಿಸುವ ಪ್ರಕಾರ ಇದು ಒಳಮುಖವಾಗಿ ಬೆಳೆದ ಕೂದಲು ಅಥವಾ ಹುಣ್ಣು, ಬ್ಯಾಕ್ಟೀರಿಯಾ ಸೋಂಕಿನಿಂದ ಬರಬಹುದು. ಹಲವು ಹಂತದ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಬಳಿಕ ಎಗ್ಲಿನ್ ಬದುಕಿಗೆ ಮರಳಿದ್ದಾರೆ. ತೀವ್ರತರವಾದ ಜ್ವರ ಕಾಣಿಸಿಕೊಂಡು ಅದು ಅನಿರೀಕ್ಷಿತ ತಿರುವು ಪಡೆದರೆ ತಕ್ಷಣವೇ ವೈದ್ಯಕೀಯ ಆರೈಕೆಯನ್ನು ಪಡೆಯಲು ಎಗ್ಲಿನ್ ಮನವಿ ಮಾಡಿದ್ದಾರೆ.