ಇದೊಂದು ಅದ್ಭುತ ಪ್ರೇಮಕಥೆ. ಫೇಸ್‌ಬುಕ್ ಇದಕ್ಕೆ ವೇದಿಕೆ. ಬಾಂಗ್ಲಾದೇಶದ ಯುವತಿ. ಆಕೆಗೆ 22 ವರ್ಷ ವಯಸ್ಸು. ಹೆಸರು ಕೃಷ್ಣಾ ಮಂಡಲ್. ಈಕೆಯ ಪ್ರಿಯಕರ ಭಾರತದ ಕೋಲ್ಕತದವನು. ಹೆಸರು ಅಭಿಕ್ ಮಂಡಲ್. ಫೇಸ್‌ಬುಕ್ ಮೂಲಕ ಆರಂಭವಾದ ಗೆಳೆತನ, ಪ್ರೇಮಕ್ಕೆ ತಿರುಗಿತು. ಭೇಟಿ ಆಗಬೇಕು, ಮದುವೆಯೇ ಆಗಿಬಿಡಬೇಕು ಎಂಬ ಹಂಬಲ ಯುವತಿಯಲ್ಲಿ ಹೆಚ್ಚಾಯಿತು. ಹೆಚ್ಚೇನೂ ಆಲೋಚಿಸಲಿಲ್ಲ ಆಕೆ.
ಭಾರತಕ್ಕೆ ಹೋಗಲು ಪಾಸ್‌ಪೋರ್ಟ್ ಇಲ್ಲ. ಇನ್ನೇನು ಮಾಡೋದು. ಸುಂದರ್‌ಬನ್ ಕಾಡುಗಳ ನಡುವೆ ಸಾಗಿ ಬಂಗಾಳ ಕೊಲ್ಲಿ ಭಾಗದಲ್ಲಿ ನದಿಯನ್ನು ಈಜಿ ಹೋಗಿ ಬಿಡೋದು ಎಂಬ ಅಪಾಯಕಾರಿ ತೀರ್ಮಾನಕ್ಕೆ ಬಂದಳು ಕೃಷ್ಣಾ. ರಾಯಲ್ ಬೆಂಗಾಲ್ ಟೈಗರ್ಸ್ ಎಂದೇ ಜನಪ್ರಿಯವಾಗಿರುವ ಹುಲಿಗಳ ಆವಾಸ ಸ್ಥಾನ ಅದು. ಇದಲ್ಲದೆ ಅನೇಕ ಕಾಡುಪ್ರಾಣಿಗಳೂ ಅಲ್ಲಿವೆ. ನಿಶ್ಚಯಿಸಿದಂತೆ ಸುಂದರ್‌ಬನ್ ಕಾಡು ಪ್ರವೇಶಿಸಿದ ಆಕೆ, ಎದೆಗುಂದದೆ ಮುನ್ನಡೆದು ಬಂದು ಒಂದು ಗಂಟೆ ಕಾಲ ಈಜಿ ಭಾರತದೊಳಕ್ಕೆ ಪ್ರವೇಶಿಸಿದಳು.
BIG BREAKING: ಅಯೋಧ್ಯೆ ರಾಮಮಂದಿರ ಗರ್ಭಗೃಹಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಯೋಗಿ
ಕೃಷ್ಣಾಳ ಜೀವನಪ್ರೀತಿ ಅದೆಷ್ಟು ಇತ್ತು ಎಂದರೆ, ಎಲ್ಲವೂ ಮೀರಿ ಭಾರತಕ್ಕೆ ಬಂದಿದ್ದಾಳೆ. ಗಡಿಯಲ್ಲಿ ಕೂಡ ಪಹರೆಯವರ ಕಣ್ತಪ್ಪಿ ಒಳಗೆ ನುಗ್ಗಿದ್ದಳು. ಅಲ್ಲಿಂದ ಕೋಲ್ಕತಕ್ಕೆ ಬಂದು ಕಳೆದವಾರ ಅಭಿಕ್ ಮಂಡಲ್ ನನ್ನು ಭೇಟಿಯಾದಳು. ಕಾಳಿಘಾಟ್ ದೇವಸ್ಥಾನಕ್ಕೆ ಸೋಮವಾರ ತೆರಳಿ ಇಬ್ಬರೂ ವಿವಾಹವಾಗಿದ್ದಾರೆ. ಇದು ಪ್ರೇಮ ವಿವಾಹ ಮತ್ತು ಬಾಂಗ್ಲಾದ ಯುವತಿ ಆದ್ದರಿಂದ ಈ ವಿವಾಹ ಕಾಡ್ಗಿಚ್ಚಿನಂತೆ ಸುದ್ದಿಯಾಯಿತು. ಅಧಿಕಾರಿಗಳಿಗೆ ಸುದ್ದಿ ಹೋಯಿತು. ದೇವಸ್ಥಾನದಲ್ಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.