ಧಾರವಾಡ: ಬಾಡಿಗೆ ಮನೆಯಲ್ಲಿಯೇ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಶ್ರೀನಗರದ ಒಂದನೇ ಕ್ರಾಸ್ ನಲ್ಲಿ ನಡೆದಿದೆ.
ಶ್ವೇತಾ ಗುದಗಾಪುರ (24) ಮೃತ ಮಹಿಳೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಶ್ವೇತಾ, 5 ವರ್ಷಗಳ ಹಿಂದೆ ರಾಮದುರ್ಗದ ವಿಶ್ವನಾಥ್ ಎಂಬುವವರನ್ನು ವಿವಾಹವಾಗಿದ್ದರು. ಇನ್ ಸ್ಟಾದಲ್ಲಿ ಪರಿಚಯನಾಗಿದ್ದ ಧಾರವಾಡ ಮೂಲದ ಯುವಕನ ಪ್ರೀತಿಗೆ ಬಿದ್ದು, ಪತಿಯನ್ನು ಬಿಟ್ಟು ಯುವಕನನ್ನು ನಂಬಿ ಧಾರವಾಡಕ್ಕೆ ಬಂದಿದ್ದಳು.
ಹೀಗೆ ಧಾರವಾಡಕ್ಕೆ ಬಂದ ಶ್ವೇತಾ ಒಂದುವರೆ ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದೇನೆ ಎಂದು ಹೇಳಿ ರೂಂ ಬಾಡಿಗೆಗೆ ಪಡೆದು ವಾಸವಾಗಿದ್ದಳು. ಪತಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಳು. ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಶ್ವೇತಾ, ಇದೀಗ ಏಕಾಏಕಿ ನೇಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.