ವರದಕ್ಷಿಣೆಗೆ ಕೇಳಿದ್ದ ಫಾರ್ಚುನರ್ ಕಾರ್ ಕೊಟ್ಟಿಲ್ಲವೆಂದು ಗಂಡನ ಮನೆಯವರು ಸೊಸೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಸೂರಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೀಡಾದ ನವವಿವಾಹಿತ ಮಹಿಳೆಯ ಪತಿ, ಮಾವ ಮತ್ತು ಅತ್ತೆಯನ್ನು ಗೌತಮ್ ಬುದ್ಧ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಯ ಕುಟುಂಬದಿಂದ ಫಾರ್ಚುನರ್ ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳನ್ನು ಬಿರೌಂಡಿ ಗ್ರಾಮದ ನಿವಾಸಿಗಳಾದ ನಂದಕಿಶೋರ್ (52), ಸೆಮ್ಮ (48) ಮತ್ತು ಪ್ರಿನ್ಸ್ (23) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಅವರು ನವವಿವಾಹಿತ ಮಹಿಳೆಯನ್ನು ಕೇಬಲ್ ವೈರ್‌ನಿಂದ ಕತ್ತು ಹಿಸುಕಿ ಕೊಂದಿದ್ದಾರೆ.
ಮೃತ ಅಂಜು ಈ ವರ್ಷ ಫೆಬ್ರವರಿ 27 ರಂದು ಆರೋಪಿ ಪ್ರಿನ್ಸ್ ಅವರನ್ನು ವಿವಾಹವಾಗಿದ್ದರು. ಸೊಸೆ ಅನುಮಾನಾಸ್ಪದವಾಗಿ ಮೃತಪಟ್ಟಿರೋದಾಗಿ ಆರೋಪಿತ ಅತ್ತೆ ಮೃತ ಮಹಿಳೆಯ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳು ಫಾರ್ಚುನರ್ ಕಾರು ಮತ್ತು 10 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆಯಿಟ್ಟಿದ್ದರು. ಮೃತ ಮಹಿಳೆಯ ಕುಟುಂಬಸ್ಥರು ಸ್ವಿಫ್ಟ್ ಕಾರನ್ನು ನೀಡಿದ್ದರು ಆದರೆ ಅದರಿಂದ ತೃಪ್ತರಾಗದ ಗಂಡನ ಮನೆಯವರೆಲ್ಲಾ ಸೇರಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಎಲ್‌ಜಿ ವೃತ್ತದಿಂದ ಬಂಧಿಸಲಾಗಿದ್ದು ಮೂವರನ್ನೂ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಬಳಸಲಾಗಿದೆ ಎನ್ನಲಾದ ಕೇಬಲ್ ವೈರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 498ಎ (ಗಂಡ ಅಥವಾ ಆತನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 304ಬಿ (ವರದಕ್ಷಿಣೆ ಸಾವು) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಸೂರಜ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.