ನೋಯ್ಡಾದಲ್ಲಿ ಯುವತಿಯೊಬ್ಬರು ರಸ್ತೆ ನಡುವೆ ಇ-ರಿಕ್ಷಾ ಚಾಲಕನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿ, ನಿಂದಿಸಿ, ಕಿರುಚಾಡಿ ಆತನನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೋಯ್ಡಾದ 2 ನೇ ಹಂತದ, ಸೆಕ್ಟರ್ 110 ರ ಮಾರುಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಇ-ರಿಕ್ಷಾದ ಒಂದು ಬದಿಯು ಯುವತಿಯ ಕಾರಿಗೆ ಢಿಕ್ಕಿಯಾಯಿತು. ನಂತರ ಕಾರಿನಲ್ಲಿದ್ದ ಯುವತಿ ತಾಳ್ಮೆ ಕಳೆದುಕೊಂಡು ಇ-ರಿಕ್ಷಾ ಚಾಲಕನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದ್ದಾಳೆ. ಅಷ್ಟರಲ್ಲಿ ಕೆಲವು ಪ್ರತ್ಯಕ್ಷದಶಿರ್ಗಳು ಸ್ಥಳದಲ್ಲಿ ಜಮಾಯಿಸಿದ್ದರೂ ಯಾರೂ ಮಧ್ಯ ಪ್ರವೇಶಿಸಲಿಲ್ಲ.
ವಿಡಿಯೋ ವೈರಲ್ ಆದ ನಂತರ ಯುವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದೆ. ಆಕೆಯಿಂದ ಪೆಟ್ಟುತಿಂದ ಸಂತ್ರಸ್ತ ಮಿಥುನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ಕಿರಣ ಸಿಂಗ್ರನ್ನು ಬಂಧಿಸಿದ್ದಾರೆ.
ರಿಕ್ಷಾ ಚಾಲಕನ ಮೇಲೆ ದೌರ್ಜನ್ಯ ಎಂದು ನೆಟ್ಟಿಗರು ಹರಿಹಾಯ್ದಿದ್ದಾರೆ. ಅಪಘಾತ ಆಕಸ್ಮಿಕ, ಆ ಯುವತಿ ದೂರು ಕೊಡಲಿ, ಅದರ ಬದಲು ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಟೀಕಾಪ್ರಹಾರ ಮಾಡಿದ್ದಾರೆ.