ಎರಡು ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಇಂಫಾಲ್ ಪಶ್ಚಿಮ ಜಿಲ್ಲೆಯ ಶಾಲೆಯೊಂದರ ಹೊರಗೆ ಅಪರಿಚಿತ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಮಣಿಪುರದಾದ್ಯಂತ ಶಾಲೆಗಳು ಪುನರಾರಂಭಗೊಂಡ ಕೇವಲ ಒಂದು ದಿನದ ನಂತರ ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಶಿಶು ನಿಷ್ಠ ನಿಕೇತನ ಶಾಲೆಯ ಹೊರಗೆ ಈ ಘಟನೆ ನಡೆದಿದೆ.
ಹಿಂಸಾಚಾರದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಪೊಲೀಸ್ ಶಸ್ತ್ರಾಗಾರದಿಂದ ಬಂದೂಕುಗಳನ್ನು ಲೂಟಿ ಮಾಡಲು ಗಲಭೆಕೋರರ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಭಾರತೀಯ ರಿಸರ್ವ್ ಬೆಟಾಲಿಯನ್ (IRB) ಸಿಬ್ಬಂದಿಯ ಮನೆಗೆ ಜನಸಮೂಹವು ತೌಬಲ್ ಜಿಲ್ಲೆಯಲ್ಲಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಮಾರಣಾಂತಿಕ ಘರ್ಷಣೆಯಲ್ಲಿ 27 ವರ್ಷದ ರೊನಾಲ್ಡೊ ಅವರು ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡ ಅವರನ್ನ ಇಂಫಾಲ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು. ಘರ್ಷಣೆಯಲ್ಲಿ 10 ಮಂದಿಗೆ ಗಾಯಗಳಾಗಿದ್ದು, ಆರು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣಿಪುರ ಸರ್ಕಾರವು “ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ತಡೆಯಲು” ಜುಲೈ 10 ರ ಮಧ್ಯಾಹ್ನ 3 ರವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಅಮಾನತನ್ನು ವಿಸ್ತರಿಸಿದೆ. ಮೇ 3 ರಂದು ಜನಾಂಗೀಯ ಸಮುದಾಯಗಳ ನಡುವೆ ಘರ್ಷಣೆ ಪ್ರಾರಂಭವಾದಾಗ ಅಧಿಕಾರಿಗಳು ಮೊದಲ ಬಾರಿಗೆ ಈಶಾನ್ಯ ರಾಜ್ಯದಾದ್ಯಂತ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದರು. ಕಾಲಕಾಲಕ್ಕೆ ಅದನ್ನು ವಿಸ್ತರಿಸಲಾಗುತ್ತಿದೆ.