ಬೆಂಗಳೂರಿನಲ್ಲಿ ಇದೀಗ ಚಳಿಯಿದ್ದು, ಅಬ್ಬಬ್ಬಾ….. ಏನ್ ಚಳಿ ಗುರೂ ಅಂತಾ ಎಲ್ಲಾ ಮನೆ ಸೇರಿಕೊಳ್ಳುತ್ತಾರೆ. ಈ ಚಳಿಯನ್ನೇ ತಡೆದುಕೊಳ್ಳಲಾಗದವರಿಗೆ, ರಷ್ಯಾದ ಯಾಕುಟಿಯಾ ಪ್ರದೇಶದಲ್ಲಿ ಇದರ ತೀವ್ರತೆ ಎಷ್ಟಿರುತ್ತೆ ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ಬೆಚ್ಚಿ ಬೀಳ್ತೀರಾ..!
ಭೂಮಿಯ ಮೇಲಿನ ಅತ್ಯಂತ ಶೀತದ ಜನವಸತಿ ಪಟ್ಟಣಗಳಲ್ಲಿ ಒಂದಾದ ರಷ್ಯಾದ ಯಾಕುಟಿಯಾದಲ್ಲಿ ಬೆಳೆದ ಅನುಭವವನ್ನು ಮಹಿಳೆಯೊಬ್ಬರು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.
7.9 ಮಿಲಿಯನ್ ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಸಂಗ್ರಹಿಸಿರುವ 5 ನಿಮಿಷಗಳ ಯೂಟ್ಯೂಬ್ ವಿಡಿಯೋದಲ್ಲಿ ಕಿಯುನ್ ಬಿ ಎಂಬುವವರು ತಮ್ಮ ‘ಕೂಲ್’ ಕಥೆಯನ್ನು ಹೇಳಿದ್ದಾರೆ.
ಯಾಕುಟಿಯಾವನ್ನು ಸಖಾ ಅಥವಾ ಯಾಕುಟಿಯಾ ಎಂದೂ ಕರೆಯುತ್ತಾರೆ. ಇದು ರಷ್ಯಾದ ಪೂರ್ವದಲ್ಲಿ ಆರ್ಕ್ಟಿಕ್ ಮಹಾಸಾಗರದ ಉದ್ದಕ್ಕೂ ನೆಲೆಗೊಂಡಿದ್ದು, ಸುಮಾರು 1 ಮಿಲಿಯನ್ ಜನರು ವಾಸಿಸುತ್ತಿದ್ದಾರೆ.
ಯಾಕುಟಿಯಾದ ನಿವಾಸಿಗಳು ಕಠಿಣ ಚಳಿಗಾಲದಲ್ಲಿ ಬದುಕುಳಿಯುವಲ್ಲಿ ಪರಿಣತರಾಗಿದ್ದಾರೆ. ಅಲ್ಲಿಯ ತಾಪಮಾನವು -70 ಡಿಗ್ರಿ ಸೆಲ್ಸಿಯಸ್‌ವರೆಗೂ ಕುಸಿಯುತ್ತದೆ. ಇಲ್ಲಿನ ಜನರು ಹೇಗೆ ದಿನನಿತ್ಯದ ಜೀವನ ಸಾಗಿಸುತ್ತಾರೆ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಮೂಲಕ ಕಿಯುನ್ ಬಿ ಹಂಚಿಕೊಂಡಿದ್ದಾರೆ. ಇದು ಜಗತ್ತಿನ ಅತ್ಯಂತ ಶೀತಮಯ ಜನವಸತಿ ಪ್ರದೇಶ ಎಂದು ಕಿಯುನ್ ಬಿ ಹೇಳಿದ್ದಾರೆ.
ಯಾಕುಟಿಯಾದ ಜನರು ದಪ್ಪವಾದ ತುಪ್ಪಳವನ್ನು ಧರಿಸುತ್ತಾರೆ. ಇಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಬೂಟುಗಳನ್ನು ಹಿಮಸಾರಂಗ ಚರ್ಮದಿಂದ ತಯಾರಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಮೀನು ಮುಂತಾದ ಆಹಾರ ಪದಾರ್ಥಗಳನ್ನು ತೆರೆದ ಪ್ರದೇಶದಲ್ಲೇ ಇಡಲಾಗುತ್ತದೆ.
ಕಿಯುನ್ ಬಿ ಅವರು ವಿಡಿಯೋ ಮುಖಾಂತರ ಇಲ್ಲಿನ ಮೂಲಸೌಕರ್ಯ ಮತ್ತು ಜನರು ಹೇಗೆ ತಮ್ಮ ವಾಹನವನ್ನು ಚಾಲನೆ ಮಾಡುತ್ತಾರೆ ಎಂಬುದರ ಕುರಿತು ಕೂಡ ಹಂಚಿಕೊಂಡಿದ್ದಾರೆ. ಎಲ್ಲಾ ಸವಾಲುಗಳ ನಡುವೆಯೂ ನಿವಾಸಿಗಳು ಯಾಕುಟಿಯಾದಲ್ಲಿ ತಮ್ಮ ಜೀವನವನ್ನು ಆನಂದಿಸುತ್ತಾರೆ. ಇಲ್ಲಿನ ಜನರ ಜೀವನಶೈಲಿಯನ್ನು ಕಂಡ ಅನೇಕ ಬಳಕೆದಾರರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.