ಭೋಪಾಲ್: ಮಧ್ಯಪ್ರದೇಶದ ಮಹಿಳೆಯೊಬ್ಬಳು 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. 35 ವರ್ಷದ ಮಹಿಳೆ ಇಂತಹ ಕೃತ್ಯವೆಸಗಿದ್ದು, ವಿಷಯ ತಿಳಿದುಕೊಂಡ ಆಕೆಯ ಪತಿ ಮತ್ತು ಅಳಿಯಂದಿರು ಬಾಲಕನ ಕುಟುಂಬದವರಿಗೆ ಬೆದರಿಕೆ ಹಾಕಿ 1 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದರೆ ಅತ್ಯಾಚಾರ ಪ್ರಕರಣದಲ್ಲಿ ಬಾಲಕನನ್ನು ಬಂಧಿಸುವುದಾಗಿ ಬೆದರಿಸಿದ್ದಾರೆ.
ವರದಿಯ ಪ್ರಕಾರ, ಮಹಿಳೆ ಬಾಲಕನ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಮೇ 27 ರಂದು ಮಹಿಳೆಯ ಪತಿ ಮತ್ತು ಅಳಿಯನಿಗೆ ಈ ವಿಷಯ ಗೊತ್ತಾಗಿದೆ. ಅವರು ಬಾಲಕನಿಗೆ ನೆರವಾಗುವ ಬದಲು ಆತನ ಕುಟುಂಬದವರಿಗೆ ವಿಷಯ ತಿಳಿಸಿ, ಒಂದು ಲಕ್ಷ ರುಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸಿ ಬಾಲಕನನ್ನು ಬಂಧಿಸುವುದಾಗಿ ಬೆದರಿಸಿದ್ದಾರೆ.
ಬಾಲಕನ ಕುಟುಂಬದ ಕೃಷಿ ಭೂಮಿ ನಾಶ
ಬಾಲಕನ ಕುಟುಂಬಕ್ಕೆ ಮಹಿಳೆಯ ಪತಿ ಮತ್ತು ಅಳಿಯ ಹಣ ಕೊಡುವಂತೆ ಪೀಡಿಸಿ ಬೆದರಿಸಿದ್ದು, ಹಣ ಕೊಡಲು ನಿರಾಕರಿಸಿದಾಗ ಬಾಲಕನ ಕುಟುಂಬಕ್ಕೆ ಸೇರಿದ ಕೃಷಿಭೂಮಿಯಲ್ಲಿ ಹಾನಿ ಮಾಡಿದ್ದಾರೆ. ಪಪ್ಪಾಯಿ ಮರಗಳನ್ನು ಕಡಿದು ಹಾಕಿದ್ದಾರೆ.
ಅಂಜಿಕೆಯಿಂದ ಹೆದರಿದ ಬಾಲಕ
ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಬಾಲಕ ಸಾಮಾಜಿಕ ಕಳಂಕಕ್ಕೆ ಹೆದರಿ ಅಂಜಿಕೆಯಿಂದ ಯಾರಿಗೂ ವಿಷಯ ತಿಳಿಸಿರಲಿಲ್ಲ. ಆದರೆ, ಲೈಂಗಿಕ ದೌರ್ಜನ್ಯವೆಸಗಿದ್ದ ಮಹಿಳೆಯ ಗಂಡ ತನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ ನಂತರ ಬೇಸತ್ತ ಬಾಲಕ ರಾಜ್ ಘರ್ ನ ಚೈಲ್ಡ್ ಲೈನ್ -ಮಕ್ಕಳ ಸಹಾಯವಾಣಿಗೆ ಸಂಪರ್ಕಿಸಿದ್ದಾನೆ. ಮಕ್ಕಳ ಸಹಾಯವಾಣಿ ಸಲಹೆಗಾರ ಮನೀಶ್ ದಂಗಿ ಅವರೊಂದಿಗೆ ಮಾತನಾಡಿದ್ದಾನೆ. ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮಹಿಳೆಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಕುಟುಂಬ ಸದಸ್ಯರನ್ನು ಸೆಕ್ಷನ್ 384(ಸುಲಿಗೆ ಶಿಕ್ಷೆ), 427(ಕಿಡಿಗೇಡಿತನ ಹಾನಿ) ಅಡಿಯಲ್ಲಿ ಬಂಧಿಸಲಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ವಿಭಾಗಗಳಡಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.