ಮುಂಬೈ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ವಿ. ಗಣದೇವಾಲಾ ಅವರಿಗೆ ಮಹಿಳೆಯೊಬ್ಬರು 150 ಕಾಂಡೋಮ್ ಕಳುಹಿಸಿದ್ದಾರೆ.
ಅಹಮದಾಬಾದ್ ನ ರಾಜಕೀಯ ವಿಶ್ಲೇಷಕಿ ಎಂದು ಹೇಳಿಕೊಳ್ಳುವ ದೇವಶ್ರೀ ತ್ರಿವೇದಿ ಅವರು ನ್ಯಾಯಮೂರ್ತಿ ಪುಷ್ಪಾ ಅವರಿಗೆ ಬಾಂಬೆ ಹೈಕೋರ್ಟ್ ನ ನಾಗಪುರ ನ್ಯಾಯಪೀಠದ ಕಚೇರಿಗೆ ಮತ್ತು ಮುಂಬೈನ ಹೈಕೋರ್ಟ್ ಪ್ರಧಾನ ಕಚೇರಿ ಸೇರಿದಂತೆ 12 ಸ್ಥಳಗಳಿಗೆ ಕಾಂಡೋಮ್ ಕಳುಹಿಸಿದ್ದಾರೆ.
ನ್ಯಾಯಮೂರ್ತಿ ಪುಷ್ಪಾ ಅವರ ವಿವಾದಿತ ತೀರ್ಪಿನಿಂದಾಗಿ ಅಪ್ರಾಪ್ತ ಬಾಲಕಿಗೆ ನ್ಯಾಯ ಸಿಗಲಿಲ್ಲ. ಹಾಗಾಗಿ ನ್ಯಾಯಮೂರ್ತಿ ಸ್ಥಾನದಿಂದ ಪುಷ್ಪಾ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸುವುದಾಗಿ ದೇವಶ್ರೀ ತ್ರಿವೇದಿ ತಿಳಿಸಿದ್ದಾರೆ.
ಜನವರಿ 19 ರಂದು ನ್ಯಾಯಮೂರ್ತಿ ಪುಷ್ಪಾ ನೀಡಿದ ತೀರ್ಪಿನ ಬಗ್ಗೆ ಮಾತನಾಡಿದ ದೇವಶ್ರೀ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚರ್ಮದಿಂದ ಚರ್ಮ ಸ್ಪರ್ಶವಿಲ್ಲದೆ ದೈಹಿಕ ಸಂಪರ್ಕವಿಲ್ಲದೆ ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ಪೋಕ್ಸೋ ಕಾಯ್ದೆಯ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾನು ನ್ಯಾಯಮೂರ್ತಿ ಕೊಠಡಿ ಸೇರಿದಂತೆ 12 ಸ್ಥಳಗಳಿಗೆ ಕಾಂಡೋಮ್ ಕಳುಹಿಸಿದ್ದು, ಅವುಗಳು ತಲುಪಿದ ಬಗ್ಗೆ ಸ್ವೀಕೃತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಪುಷ್ಪಾ ಅವರ ತೀರ್ಪುಗಳಿಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಬಹುದು. ಆರೋಪಿಗಳು ಅಪರಾಧಗಳಿಂದ ಮುಕ್ತರಾಗಬಹುದು ಎನ್ನುವ ಆತಂಕವಿದೆ ಎಂದು ತಿಳಿಸಿದ್ದಾರೆ.
ಅಂದ ಹಾಗೇ, ನಾಗಪುರ ಹೈಕೋರ್ಟ್ ಪೀಠದಲ್ಲಿ ಯಾವುದೇ ರೀತಿಯ ಕಾಂಡೋಮ್ ಪ್ಯಾಕೆಟ್ ಗಳನ್ನು ಸ್ವೀಕರಿಸಿಲ್ಲ ಎಂದು ಹೇಳಲಾಗಿದ್ದು, ಕಾಂಡೋಮ್ ಕಳಿಸಿದ್ದರೆ ಆ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗಪುರ್ ಬಾರ್ ಅಸೋಸಿಯೇಷನ್ ಹಿರಿಯ ವಕೀಲ ಶ್ರೀರಂಗ ಭಂಡಾರ್ಕರ್ ಹೇಳಿದ್ದಾರೆ.