ಜಗತ್ತಿನಾದ್ಯಂತ ಇರುವ ಊರುಗಳ ಬೀದಿ ಬೀದಿಗಳನ್ನು ಅಲ್ಲಿಗೇ ಹೋಗಿ ನೋಡುವಂಥ ಸೂಪರ್ ಅನುಭವ ಕೊಡುತ್ತೆ ಗೂಗಲ್ ಮ್ಯಾಪ್ಸ್‌ನ ಸ್ಟ್ರೀಟ್ ವ್ಯೂ. ಈ ಅದ್ಭುತ ಫೀಚರ್ ಮೂಲಕ ಜನರು ತಂತಮ್ಮ ಮನೆಗಳಲ್ಲೇ ಕುಳಿತು ಜಗತ್ತಿನ ಪರ್ಯಟನೆ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ, ಇನ್ನಿಲ್ಲವಾಗಿರುವ ತಮ್ಮ ಬಂಧುಗಳನ್ನು ಸ್ಟ್ರೀಟ್ ವ್ಯೂನಲ್ಲಿ ಕಂಡು ಭಾವುಕರಾಗುವ ಜನರ ಬಗ್ಗೆಯ ಸುದ್ದಿಗಳು ಸದ್ದು ಮಾಡಿದ್ದವು.
ಇಂಥದ್ದೇ ನಿದರ್ಶನವೊಂದರಲ್ಲಿ, ಮೂರು ವರ್ಷಗಳ ಹಿಂದೆ ತನ್ನನ್ನು ಬಿಟ್ಟು ಹೋದ ತಂದೆಯನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕಂಡ ಮಹಿಳೆಯೊಬ್ಬರು ಭಾವುಕರಾಗಿದ್ದಾರೆ.
ಟ್ವಿಟರ್ ಬಳಕೆದಾರಿಣಿ ಕರೇನ್, ಇಂಗ್ಲೆಂಡ್‌ನ ಕಾರ್ನ್‌ವಾಲ್‌ನ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ತೀರಿ ಹೋದ ತನ್ನ ತಂದೆಯನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕಂಡು, ನೆನಪುಗಳ ಅಣೆಕಟ್ಟೆಯೊಡೆದು ಭಾವುಕರಾಗಿದ್ದಾರೆ.
ಸ್ಟ್ರೀಟ್ ವ್ಯೂನಲ್ಲಿ ತನ್ನ ಮನೆಯನ್ನು ಹುಡುಕುತ್ತಿದ್ದ ವೇಳೆ ತನ್ನ ತಂದೆಯ ಚಿತ್ರವನ್ನು ಕಂಡಿದ್ದಾಗಿ ಹೇಳಿರುವ ಕರೆನ್, ಆ ಚಿತ್ರವನ್ನು ಪೋಸ್ಟ್ ಮಾಡುತ್ತಲೇ, ಅನೇಕರು ಇದನ್ನೇ ಅನುಸರಿಸಿ, ಇದೇ ಫೀಚರ್‌ನಲ್ಲಿ ದಿವಂಗತರಾಗಿರುವ ತಮ್ಮ ಪ್ರೀತಿಪಾತ್ರರು ಕಂಡುಬಂದ ಚಿತ್ರಗಳನ್ನು ಹಂಚಿಕೊಂಡು ಹೊಸ ಟ್ರೆಂಡ್ ಒಂದನ್ನು ಹುಟ್ಟುಹಾಕಿದ್ದರು.
ಗೂಗಲ್ ಸ್ಟ್ರೀಟ್ ವ್ಯೂ ಹಾಗೂ ಉಪಗ್ರಹದ ಆಯಾಮದ ಚಿತ್ರಾವಳಿಯನ್ನು ಬಹಳ ದಿನಗಳ ಮಟ್ಟಿಗೆ ಅಪ್ಡೇಟ್ ಮಾಡದೇ ಇರುವ ಕಾರಣ, ಹೀಗೆ ಹಳೆಯ ನೆನಪುಗಳು ಮರುಕಳಿಸುವ ಸಾಧ್ಯತೆಗಳು ಹುಟ್ಟಿಕೊಂಡಿವೆ.