
ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಗಲಾಟೆ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದನ್ನು ದೀಪಿಕಾ ಭಾರದ್ವಾಜ್ ಎಂಬ ಪತ್ರಕರ್ತೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜ್ಯೋತಿ ಎಂದು ಗುರುತಿಸಲಾದ ಮಹಿಳೆ ತನ್ನ ಸವಾರಿಗೆ ಹಣವನ್ನು ಪಾವತಿಸಲು ನಿರಾಕರಿಸಿದ್ದಾಳೆ. ಹಣ ಪಾವತಿಸುವಂತೆ ಚಾಲಕ ಒತ್ತಾಯಿಸಿದಾಗ ಹೈಡ್ರಾಮವನ್ನೇ ಶುರುಮಾಡಿದ್ದಾಳೆ.
ಈ ಮಹಿಳೆ ಜ್ಯೋತಿ ಶನಿವಾರ ರಾತ್ರಿ 10 ಗಂಟೆಗೆ ಇರ್ಷಾದ್ ಎಂಬಾತನಿಂದ ಕ್ಯಾಬ್ ಅನ್ನು ಬಾಡಿಗೆಗೆ ಪಡೆದಿದ್ದಾಳೆ. ಬೆಳಗ್ಗೆ 11 ಗಂಟೆಯವರೆಗೆ ಸುತ್ತಾಡಿದ್ದಾಳೆ. ಬಳಿಕ ಆತನಿಗೆ ಕೊಡಬೇಕಾದ 2,000 ರೂ. ಹಣ ನೀಡದೆ ಸತಾಯಿಸಿದ್ದಾಳೆ ಎಂದು ಟ್ವಿಟರ್ ನಲ್ಲಿ ಪತ್ರಕರ್ತೆ ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಪತ್ರಕರ್ತೆಯೊಂದಿಗೆಯೇ ವಾದ ಶುರು ಮಾಡಿದ್ದಾಳೆ. ಪೊಲೀಸರನ್ನೇ ನೀವೇನು ಹುಚ್ಚರಾ ಎಂದು ಪ್ರಶ್ನಿಸಿದ್ದಾಳೆ. ಪತ್ರಕರ್ತೆ ಘಟನೆಯ ದೃಶ್ಯವನ್ನು ಚಿತ್ರೀಕರಿಸುವಾಗ ಆಕೆಗೂ ಬೆರಳು ತೋರಿಸಿ ನಿಂದಿಸಿದ್ದಾಳೆ.
ರಸ್ತೆಬದಿಯಲ್ಲಿ ಗಲಾಟೆ ನಡೆಯುತ್ತಿತ್ತು. ಅದೇನೆಂದು ತಿಳಿಯಲು ಸ್ಥಳಕ್ಕೆ ಧಾವಿಸಿದೆ. ಈ ವೇಳೆ ಮಹಿಳೆಯೊಬ್ಬಳು ಅಸಹಾಯಕ ವ್ಯಕ್ತಿಗೆ ಇನ್ನಿಲ್ಲದಂತೆ ಬೈಯ್ಯುತ್ತಿದ್ದಳು. ಪೊಲೀಸರು ಮಧ್ಯಪ್ರವೇಶಿಸಿದ್ರೂ ಅವರಿಗೂ ಬೈಗುಳದ ಸುರಿಮಳೆಯೇ ಆಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದ್ರೆ ತನಗೆ ನಿಂದಿಸಿದ್ಲು. ಬಹುತೇಕ ತನ್ನ ಮೇಲೆ ದಾಳಿ ಮಾಡಲು ಮುಂದಾದ್ಲು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ್ರು ಎಂದು ಪತ್ರಕರ್ತೆ ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ವಿವರಿಸಿದ್ದಾರೆ.
2017ರಲ್ಲಿ 100 ರೂ. ಕೊಡಲು ಜಗಳ ಮಾಡಿದ್ದ ಈಕೆ, ಶನಿವಾರ ರಾತ್ರಿ ಆಕೆಯ ಸವಾರಿಗಾಗಿ 2000 ರೂ.ಗಳನ್ನು ಕೊಡದೆ ಸತಾಯಿಸಿದ್ದಾಳೆ. ಅಲ್ಲದೆ, ಚಾಲಕನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.