ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ತಡರಾತ್ರಿ ಸಿನಿಮಾ ನೋಡಿ ಮನೆಗೆ ಬರುತ್ತಿದ್ದ ಮಹಿಳೆಯನ್ನು ಐವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಜಿಲ್ಲೆಯ ಕಟಪಾಡಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿದೆ. ಐವರು ಆರೋಪಿಗಳು ಆಟೋ ರಿಕ್ಷಾದಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಅಪ್ರಾಪ್ತರು ಎನ್ನಲಾಗಿದೆ. ಐದನೇ ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಪೊಲೀಸರಿಗೆ ಇಮೇಲ್ ದೂರು ನೀಡಿದ ನಂತರ ಅಪರಾಧ ಬೆಳಕಿಗೆ ಬಂದಿದೆ ಎಂದು ವೆಲ್ಲೂರ್ ಎಸ್ಪಿ ಎಸ್ ರಮೇಶ್ ಕಣ್ಣನ್ ಹೇಳಿದ್ದಾರೆ.
ಮಹಿಳೆ ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಪುರುಷ ಸ್ನೇಹಿತ ಆಸ್ಪತ್ರೆಗೆ ಹಿಂತಿರುಗಲು ಆಟೋ ಹತ್ತಿದಾಗ ಈ ಘಟನೆ ನಡೆದಿದೆ.
ಸ್ವಲ್ಪ ದೂರ ಕ್ರಮಿಸಿದ ನಂತರ, ಆಟೋದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆ, ಸ್ನೇಹಿತನನ್ನು ಬೆದರಿಸಿದರು. ಆಟೋವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದು ಮಹಿಳೆಗೆ ಚಾಕು ತೋರಿಸಿ ದೌರ್ಜನ್ಯ ಎಸಗಿದ್ದಾರೆ.
ಆರೋಪಿಗಳು ಅವರಿಂದ 40 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಐವರು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಅಪ್ರಾಪ್ತರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಐದನೇ ಆರೋಪಿಯನ್ನು ಗುರುತಿಸಲಾಗಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.