ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ 24 ವರ್ಷದ ಯುವತಿಯು ಶಸ್ತ್ರಚಿಕಿತ್ಸೆ ವೇಳೆ ಹನುಮಾನ್ ಚಾಲೀಸಾ ಪಠಿಸಿದ್ದಾಳೆ. ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯರು ನಡೆಸಿದ ಮೂರು ಗಂಟೆಗಳ ಅವಧಿಯ ನಿರ್ಣಾಯಕ ಶಸ್ತ್ರಚಿಕಿತ್ಸೆಯುದ್ದಕ್ಕೂ ಯುವತಿಯು ಎಚ್ಚರವಾಗಿದ್ದು, ಹನುಮಾನ್ ಚಾಲೀಸಾ ಪಠಿಸಿದ್ದಾಳೆ. ಆಪರೇಷನ್ ತಂಡದ ಭಾಗವಾಗಿದ್ದ ವೈದ್ಯರಲ್ಲಿ ಒಬ್ಬರಾದ ಡಾ.ದೀಪಕ್ ಗುಪ್ತಾ, ರೋಗಿಗೆ ಆಪರೇಷನ್ ನಡೆಸಲು ನೋವು ನಿವಾರಕವಾಗಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು ಎಂದು ಹೇಳಿದ್ದಾರೆ.
ಪ್ರಸ್ತುತ ರೋಗಿಯು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಇಂದು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳೆದ ಎರಡು ದಶಕಗಳಲ್ಲಿ ಏಮ್ಸ್ ಆಸ್ಪತ್ರೆಯು ಅವೇಕ್ ಕ್ರಾನಿಯೊಟೊಮೀಸ್ ಅಥವಾ ಹಲವು ನಿರ್ಣಾಯಕ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಇಂತಹ 500 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು 20 ವರ್ಷಗಳಲ್ಲಿ ಪೂರ್ಣಗೊಂಡಿರಬೇಕು ಎಂದು ಏಮ್ಸ್ ಅಧಿಕಾರಿಗಳ ತಂಡ ತಿಳಿಸಿದೆ. ಅಲ್ಲದೆ ಇಂತಹ ಪ್ರಕರಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಯು ತ್ವರಿತ ಚೇತರಿಕೆ ಹಾಗೂ ಡಿಸ್ಜಾರ್ಜ್ ಸಾಧ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.